Bhatkal| ತಾಲೂಕಿನ ಶಿರಾಲಿ ಭಾಗದಲ್ಲಿ ಚಿಪ್ಪಿಕಲ್ಲು ಮೀನುಗಾರಿಕೆಗೆ ತೆರಳಿದ್ದ 11 ಮಂದಿ ದುರ್ಮರಣಕ್ಕೀಡಾದ ದುರಂತದ ಹಿನ್ನೆಲೆಯಲ್ಲಿ ಸಾಮಾಜಿಕ ಹೋರಾಟಗಾರ ಹಾಗೂ ಜನಪರ ಮುಖಂಡ ಮಾಸ್ತಪ್ಪ ನಾಯ್ಕ ಬಲ್ಸೆ ಅವರು ಸಂತ್ರಸ್ತ ಕುಟುಂಬಗಳಿಗೆ ₹3 ಲಕ್ಷ ಧನ ಸಹಾಯ ವಿತರಿಸಿದರು.

ಸಂತ್ರಸ್ತರ ಮನೆಗಳಿಗೆ ಭೇಟಿ ನೀಡಿ ಕುಟುಂಬ ಸದಸ್ಯರಿಗೆ ಸಾಂತ್ವನ ಹೇಳಿದ ಅವರು, ಮೃತಪಟ್ಟ ಹತ್ತು ಕುಟುಂಬಗಳಿಗೆ ತಲಾ ₹25 ಸಾವಿರದಂತೆ ಒಟ್ಟು ₹2.50 ಲಕ್ಷ ಹಾಗೂ ತಂದೆ-ತಾಯಿ ಇಬ್ಬರನ್ನೂ ಕಳೆದುಕೊಂಡು ಅನಾಥರಾದ ಮಕ್ಕಳ ಶಿಕ್ಷಣಕ್ಕಾಗಿ ₹50 ಸಾವಿರ ನೆರವು ನೀಡಿದರು.

ಈ ವೇಳೆ ಮಾತನಾಡಿದ ಮಾಸ್ತಪ್ಪ ನಾಯ್ಕ ಬಲಸೆ, ಶಿರಾಲಿಯಲ್ಲಿ ಸಂಭವಿಸಿದ ದುರಂತ ಅತ್ಯಂತ ನೋವಿನ ಸಂಗತಿಯಾಗಿದ್ದು, ಘಟನೆಯ ಕುರಿತು ಸಮಗ್ರ ತನಿಖೆ ನಡೆಸಿ ಮೃತರ ಕುಟುಂಬಗಳಿಗೆ ನ್ಯಾಯ ಒದಗಿಸಬೇಕೆಂದು ಆಗ್ರಹಿಸಿದರು. ಅಲ್ಲದೆ ಜಿಲ್ಲೆಯ ವಿವಿಧ ಸಂಘ-ಸಂಸ್ಥೆಗಳು, ಖಾಸಗಿ ಶಿಕ್ಷಣ ಸಂಸ್ಥೆಗಳು, ಉದ್ಯಮಿಗಳು, ಜನಪ್ರತಿನಿಧಿಗಳು ಹಾಗೂ ರಾಜಕೀಯ ಮುಖಂಡರು ಮಾನವೀಯತೆ ತೋರಿಸಿ ಸಂತ್ರಸ್ತ ಕುಟುಂಬಗಳ ನೆರವಿಗೆ ಬರಬೇಕೆಂದು ಮನವಿ ಮಾಡಿದರು. ತಂದೆ-ತಾಯಿ ಇಬ್ಬರನ್ನೂ ಕಳೆದುಕೊಂಡಿರುವ ನಾಲ್ವರು ಮಕ್ಕಳ ಕುಟುಂಬದ ಸ್ಥಿತಿ ಅತ್ಯಂತ ದುಃಖಕರವಾಗಿದ್ದು, ಅವರಲ್ಲಿ ಒಬ್ಬ ಯುವತಿ ಪಿಯುಸಿ ದ್ವಿತೀಯ ವರ್ಷ ಪೂರ್ಣಗೊಳಿಸಿದ್ದರೂ ಮುಂದಿನ ಜೀವನಕ್ಕೆ ಆಧಾರವಿಲ್ಲದ ಪರಿಸ್ಥಿತಿಯಲ್ಲಿ ಉದ್ಯೋಗಕ್ಕಾಗಿ ಮನವಿ ಮಾಡಿಕೊಂಡಿರುವುದು ಹೃದಯವಿದ್ರಾವಕವಾಗಿದೆ ಎಂದು ಅವರು ಹೇಳಿದರು.

ಅನಾಥ ಮಕ್ಕಳ ಭವಿಷ್ಯದ ದೃಷ್ಟಿಯಿಂದ ಸರ್ಕಾರ ವಿಶೇಷ ಗಮನ ಹರಿಸಿ ಶಿಕ್ಷಣ ಮತ್ತು ಉದ್ಯೋಗದ ಭದ್ರತೆ ಒದಗಿಸಬೇಕು. ಅರ್ಹತೆಯಿರುವ ಯುವತಿಗೆ ಬ್ಯಾಂಕ್, ಸಹಕಾರಿ ಸಂಸ್ಥೆ ಅಥವಾ ಇತರೆ ಯಾವುದೇ ಸಂಸ್ಥೆಯಲ್ಲಿ ಉದ್ಯೋಗಾವಕಾಶ ಕಲ್ಪಿಸಿ ಕುಟುಂಬಕ್ಕೆ ಆಸರೆಯಾಗುವಂತೆ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಅನಾಥ ಮಕ್ಕಳ ಭವಿಷ್ಯ ರೂಪಿಸುವ ಜವಾಬ್ದಾರಿ ಸಮಾಜದ ಮೇಲಿದೆ ಎಂದು ಅವರು ಹೇಳಿದರು.
ಸಂತ್ರಸ್ತ ಕುಟುಂಬಗಳಿಗೆ ಸಾಂತ್ವನ ಹೇಳಿದ ಮಾಸ್ತಪ್ಪ ನಾಯ್ಕ, ಮುಂದಿನ ದಿನಗಳಲ್ಲಿಯೂ ಅವರ ಪರವಾಗಿ ಅಗತ್ಯ ನೆರವು ಹಾಗೂ ನ್ಯಾಯಕ್ಕಾಗಿ ಹೋರಾಟ ಮುಂದುವರಿಸುವುದಾಗಿ ಭರವಸೆ ನೀಡಿದರು.
