Sirsi| ನಗರದ ಕೇಂದ್ರೀಯ ಬಸ್ ನಿಲ್ದಾಣದಲ್ಲಿ ಜನಜಂಗುಳಿಯ ನಡುವೆ ಮಹಿಳೆಯೊಬ್ಬರ ಬ್ಯಾಗ್‌ನಿಂದ ಚಿನ್ನಾಭರಣ, ಮೊಬೈಲ್ ಹಾಗೂ ನಗದು ಹಣ ಕಳವು ಮಾಡಿದ ಘಟನೆ ವರದಿಯಾಗಿದೆ.

ಸೊರಬ ತಾಲೂಕಿನ ಕಲಗೋಡ ಗ್ರಾಮದ ನಿವಾಸಿ ಸವಿತಾ ನಾಯ್ಕ ಎಂಬುವವರೇ ಚಿನ್ನಾಭರಣ ಕಳೆದುಕೊಂಡವರು. ಜೂನ್ 3ರಂದು ಮಧ್ಯಾಹ್ನ ತನ್ನ ಮಗ, ಅಕ್ಕ ಮತ್ತು ಅಕ್ಕನ ಮಗಳು ಎಲ್ಲರೂ ಸೇರಿ ಶಿರಸಿ ಬಸ್ ನಿಲ್ದಾಣಕ್ಕೆ ಬಂದಿದ್ದರು. ಈ ವೇಳೆ ಅಕ್ಕನನ್ನು ಬನವಾಸಿಗೆ ತೆರಳುವ ಬಸ್‌ಗೆ ಹತ್ತಿಸಿ ಬಳಿಕ ಬಸ್ ನಿಲ್ದಾಣದ ಒಳಭಾಗದಲ್ಲಿ ಕುಳಿತಿದ್ದರು.

ನಂತರ ಮಗನಿಗೆ ತಿಂಡಿ ಕೊಡಿಸಲು ಬಸ್ ನಿಲ್ದಾಣದ ಬೇಕರಿಗೆ ತೆರಳಿದಾಗ, ಹಣ ಪಾವತಿಸಲು ಬ್ಯಾಗ್ ತೆರೆದು ನೋಡಿದಾಗ, ಅದರಲ್ಲಿದ್ದ ಸ್ಟೀಲ್ ಬಾಕ್ಸ್ ಕಾಣೆಯಾಗಿರುವುದು ಗಮನಕ್ಕೆ ಬಂದಿದೆ. ಬಾಕ್ಸ್‌ನಲ್ಲಿ ಇರಿಸಲಾಗಿದ್ದ ಸುಮಾರು 20 ಗ್ರಾಂ ತೂಕದ ಚಿನ್ನದ ಸರ, 10 ಗ್ರಾಂ ತೂಕದ ಚಿನ್ನದ ಕಿವಿಯ ಬೆಂಡೋಲೆ, ಸರಪಳಿ ಹಾಗೂ ಮಾಟಿ, ಒಂದು ಕೀಪ್ಯಾಡ್ ಮೊಬೈಲ್ ಮತ್ತು ₹8,000 ನಗದು ಹಣವನ್ನು ಕಳ್ಳರು ಬ್ಯಾಗ್‌ನ ಜಿಪ್ ತೆರೆದು ಕಳವು ಮಾಡಿದ್ದಾರೆ. ಕಳುವಾದ ವಸ್ತುಗಳ ಒಟ್ಟು ಮೌಲ್ಯ ಸುಮಾರು ₹1.59 ಲಕ್ಷ ಎಂದು ಅಂದಾಜಿಸಲಾಗಿದೆ. ಪ್ರಕರಣ ದಾಖಲಿಸಿಕೊಂಡಿರುವ ಶಿರಸಿ ನಗರ ಪೊಲೀಸರು ಕಳ್ಳರ ಪತ್ತೆಗೆ ಮುಂದಾಗಿದ್ದಾರೆ.