Karwar| ರಾಜ್ಯ ರಾಜಕಾರಣದ ಬಿರುಗಾಳಿ ಜಿಲ್ಲಾ ರಾಜಕೀಯದ ಮೇಲೆ‌ ಪರಿಣಾಮ‌ ಬೀರಲಿದ್ದು, ಅಲ್ಲೋಲ ಕಲ್ಲೋಲ‌ ಸೃಷ್ಟಿಸುವ ಸಾಧ್ಯತೆ ಇದೆ. ಜಿಲ್ಲಾ ಉಸ್ತುವಾರಿ ಪಟ್ಟ ಮಂಕಾಳು ವೈದ್ಯರಿಂದ ಕೈತಪ್ಪುವ ಸಾಧ್ಯತೆ ಇದ್ದು, ಜಿಲ್ಲೆಗೆ ನೂತನ ಉಸ್ತುವಾರಿ ಸಚಿವರ ನೇಮಕವಾಗಲಿದೆ‌ ಎಂದು ಕಾಂಗ್ರೆಸ್ ಮೂಲದಿಂದ ತಿಳಿದುಬಂದಿದೆ.

ಕಾಂಗ್ರೆಸ್ ಹೈ ಕಮಾಂಡ್ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರ ರಾಜೀನಾಮೆ ಕೇಳಿದ್ದು, ಸಿದ್ದರಾಮಯ್ಯ ಅವರು ನಾಳೆ  ಮಧ್ಯಾಹ್ನ ರಾಜ್ಯಪಾಲರ ಭೇಟಿಯಾಗಿ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ‌ ಸಲ್ಲಿಸಲಿದ್ದಾರೆ ಎಂದು ತಿಳಿದುಬಂದಿದೆ. ಇತ್ತ ಮುಖ್ಯ ಮಂತ್ರಿಗಳ ಆಪ್ತ ಶಾಸಕರು ಸಚಿವರು ಯಾವುದೇ ಕಾರಣಕ್ಕೂ ರಾಜೀನಾಮೆ ನೀಡಬೇಡಿ, ಶಾಸಕಾಂಗ ಸಭೆ ನಡೆದು ಶಾಸಕರ ಸಹಿ ಸಂಗ್ರಹವಾದ ಬಳಿಕ ರಾಜೀನಾಮೆಯ ತೀರ್ಮಾನ ಮಾಡಿ ಎಂದು ಸಿದ್ದರಾಮಯ್ಯನವರಿಗೆ ಮನವರಿಕೆ ಮಾಡುತ್ತಿದ್ದಾರೆ.

ಆದ್ರೆ ಸಿದ್ದರಾಮಯ್ಯ ಅವರು ಮಾತ್ರ ಈ ಬಾರಿ ಹೈ ಕಮಾಂಡ್ ವಿರುದ್ಧ ಹೋಗುವುದು ಬೇಡ, ಹೈಕಮಾಂಡ್ ಎದುರಿಗೆ ಒಂದಿಷ್ಟು ಬೇಡಿಕೆ ಇಟ್ಟು, ಬೇಡಿಕೆ ಈಡೇರಿಕೆಯ ಭರವಸೆಯೊಂದಿಗೆ ರಾಜೀನಾಮೆ ಸಲ್ಲಿಸುವ ತಿರ್ಮಾನಕ್ಕೆ ಬಂದಂತಿದೆ. 

ಒಂದೊಮ್ಮೆ ಸಿದ್ದರಾಮಯ್ಯನವರ ಷರತ್ತಿಗೆ ಹೈ ಕಮಾಂಡ್ ಸಮ್ಮತಿ ಸೂಚಿಸಿದರೆ ಅದೂ ನೇರವಾಗಿ ಮಂಕಾಳು ವೈದ್ಯ ಅವರ ಖುರ್ಚಿಗೂ ಕುತ್ತು ಬರಲಿದೆ ಎಂಬುದು ರಾಜಕೀಯ ಪಂಡಿತರ ಲೆಕ್ಕಾಚಾರ. ಹೌದು ಡಿಕೆ ಶಿವಕುಮಾರ್ ಅವರ ಆಪ್ತ ಬಣದಲ್ಲಿ ಗುರುತಿಸಿಕೊಂಡಿರುವ ಸಚಿವ ಮಂಕಾಳು ವೈದ್ಯ ‘ಒಂದೊಮ್ಮೆ ಡಿಕೆಶಿ ಮುಖ್ಯಮಂತ್ರಿಯಾದರೆ ತಮ್ಮ ಸಚಿವ ಸ್ಥಾನಕ್ಕೆ ಧಕ್ಕೆ ಇಲ್ಲವೆಂದು ತಿಳಿದಿರಬಹುದು.‌ ಆದರೆ ವಾಸ್ತವವೇ ಬೇರೆ. ಮುಖ್ಯಮಂತ್ರಿ ಪಟ್ಟಕ್ಕೆ ರಾಜೀನಾಮೆ ನೀಡುವ ಮೊದಲು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೈಕಮಾಂಡ್ ಮುಂದೆ ಪ್ರಮುಖ ಮೂರು ಬೇಡಿಕೆ ಇಟ್ಟಿದ್ದಾರೆ ಎಂದು ತಿಳಿದುಬಂದಿದೆ.

 ಒಂದೊಮ್ಮೆ ತಾನು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಲೇ ಬೇಕು ಎಂದಾದರೆ ಅಂಹಿಂದ ಸಮುದಾಯವಾದ ಅಲ್ಪಸಂಖ್ಯಾತ, ದಲಿತ ಹಾಗೂ ಹಿಂದುಳಿದ ವರ್ಗದ ಮೂವರು ಸೇರಿ ರಾಜ್ಯದ ಪ್ರಮುಖ ಸಮುದಾಯವಾದ ಲಿಂಗಾಯತರನ್ನು ಒಳಗೊಂಡು ನಾಲ್ಕು ಡಿಸಿಎಮ್ ಹುದ್ದೆ ಸೃಷ್ಟಿ ಮಾಡಬೇಕು, ತನ್ನ ಆಪ್ತ ಶಾಸಕರಿಗೆ ಸಚಿವ ಸಂಪುಟದಲ್ಲಿ ಸ್ಥಾನ ನೀಡಬೇಕು ಹಾಗೂ ಕೆಪಿಸಿಸಿ ಅಧ್ಯಕ್ಷ ಹುದ್ದೆ ಸತೀಶ್ ಜಾರಕಿಹೊಳಿ ಅಥವಾ ಎಮ್‌.ಬಿ.ಪಾಟೀಲ್ ಅವರಿಗೆ ನೀಡಬೇಕು ಎಂದು ಹೈ ಕಮಾಂಡ್ ಮುಂದೆ ಬೇಡಿಕೆ ಇಟ್ಟಿದ್ದಾರೆ ಎಂದು ತಿಳಿದುಬಂದಿದೆ. 

ಒಂದೊಮ್ಮೆ ಹೈ ಕಮಾಂಡ್ ಸಿದ್ದರಾಮಯ್ಯನವರ ಬೇಡಿಕೆಗೆ ಒಪ್ಪಿದರೆ, ಉತ್ತರಕನ್ನಡ ಜಿಲ್ಲೆಯ ರಾಜಕಾರಣದಲ್ಲೂ ಬದಲಾವಣೆ ಆಗುವ ಸಾಧ್ಯತೆ ಇದೆ. ಮೂರು ವರ್ಷದಿಂದ ಸಿ.ಎಮ್ ಹುದ್ದೆಯ ಮೇಲೆ ಕಣ್ಣಿಟ್ಟಿರುವ ಡಿ.ಕೆ ಶಿವಕುಮಾರ್ ಅವರು ತನಗೆ ಮುಖ್ಯಮಂತ್ರಿ ಹುದ್ದೆ ಸಿಗುವುದೇ ಆದರೆ ಆಪ್ತ ಶಾಸಕರು, ಸಚಿವರ ತಲೆದಂಡದ ಬಗ್ಗೆ ಹೆಚ್ಚು ತಲೆಕೆಡಿಸಿಕೊಳ್ಳುವಂತಿಲ್ಲ ಎಂಬ ತಿರ್ಮಾನಕ್ಕೆ ಬರಬಹುದು.

ಇನ್ನೂ ಹಳಿಯಾಳ ಶಾಸಕ ಆರ್.ವ್ಹಿ ದೇಶಪಾಂಡೆ ಸಿದ್ದರಾಮಯ್ಯನವರ ಆಪ್ತ ಸ್ನೇಹಿತರಾಗಿದ್ದು, ಒಂದೊಮ್ಮೆ ರಾಜ್ಯದಲ್ಲಿ ನಾಯಕತ್ವ ಬದಲಾಣೆ ಆದಲ್ಲಿ, ಹಿರಿಯ ಶಾಸಕ ಆರ್.ವ್ಹಿ ದೇಶಪಾಂಡೆ ಅವರಿಗೆ ಸಚಿವ ಸ್ಥಾನ ಒಲಿಯುವುದು ಖಚಿತ ಎಂದು ತಿಳಿದುಬಂದಿದೆ.