Dandeli| ಉತ್ತರ ಕನ್ನಡ ಜಿಲ್ಲೆಯ ದಾಂಡೇಲಿ ತಾಲೂಕಿನ ಕುಳಗಿ ಗ್ರಾಮದಲ್ಲಿ ರಾತ್ರಿ ಬೃಹತ್ ಗಾತ್ರದ ಹೆಬ್ಬಾವು ಕಾಣಿಸಿಕೊಂಡು ಗ್ರಾಮಸ್ಥರಲ್ಲಿ ಕೆಲಕಾಲ ಆತಂಕದ ವಾತಾವರಣ ನಿರ್ಮಾಣವಾಯಿತು.

ಸುಮಾರು ಹದಿನಾಲ್ಕು ಅಡಿ ಉದ್ದದ ಹೆಬ್ಬಾವು ಮನೆಯ ಗೋಡೆಯ ಸಮೀಪದ ಗಿಡಗಂಟಿಗಳಲ್ಲಿ ಕುಳಿತಿರುವುದನ್ನು ಮನೆಯವರು ಗಮನಿಸಿದರು. ತಕ್ಷಣವೇ ಅವರು ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ಮಾಹಿತಿ ನೀಡಿದರು. ಅದೃಷ್ಟವಶಾತ್ ಯಾವುದೇ ಅನಾಹುತ ಸಂಭವಿಸಿಲ್ಲ.

ಸ್ಥಳಕ್ಕೆ ಆಗಮಿಸಿದ ಅರಣ್ಯ ಇಲಾಖೆ ಸಿಬ್ಬಂದಿ ಹಾಗೂ ಹಾವು ಹಿಡಿಯುವ ತಜ್ಞರು ಹೆಬ್ಬಾವನ್ನು ಸುರಕ್ಷಿತವಾಗಿ ಸೆರೆ ಹಿಡಿದು ಬಳಿಕ ಸಮೀಪದ ಅರಣ್ಯ ಪ್ರದೇಶದಲ್ಲಿ ಬಿಟ್ಟರು.

ಘಟನೆಯ ವೇಳೆ ಗ್ರಾಮಸ್ಥರು ಹೆಚ್ಚಿನ ಸಂಖ್ಯೆಯಲ್ಲಿ ಸೇರಿಕೊಂಡು ಹೆಬ್ಬಾವನ್ನು ವೀಕ್ಷಿಸಿದರು. ಮಳೆಗಾಲ ಆರಂಭವಾದ ಹಿನ್ನೆಲೆ ಕಾಡು ಪ್ರದೇಶಗಳಿಂದ ಹಾವುಗಳು ಜನವಸತಿ ಪ್ರದೇಶಗಳಿಗೆ ಬರುತ್ತಿರುವ ಘಟನೆಗಳು ಹೆಚ್ಚಾಗುತ್ತಿರುವುದರಿಂದ ಸಾರ್ವಜನಿಕರು ಎಚ್ಚರಿಕೆಯಿಂದ ಇರಬೇಕು ಎಂದು ಅರಣ್ಯ ಇಲಾಖೆ ಸೂಚಿಸಿದೆ.