ಕಾರವಾರ: ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಮಂಡಿಸಿರುವ 2026-27ನೇ ಸಾಲಿನ ಕೇಂದ್ರ ಬಜೆಟ್  2047ರ ವೇಳೆಗೆ ಭಾರತವನ್ನು ‘ವಿಕಸಿತ ರಾಷ್ಟ್ರ’ವನ್ನಾಗಿ ಮಾಡುವ ಭದ್ರ ಬುನಾದಿ ಎಂದು ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಬಣ್ಣಿಸಿದ್ದಾರೆ.

ಈ ಬಾರಿಯ ಆಯವ್ಯಯವು ಕೃಷಿ ಮತ್ತು ಗ್ರಾಮೀಣಾಭಿವೃದ್ಧಿಗೆ ಹೊಸ ಚೈತನ್ಯ ನೀಡಿದೆ. ವಿಶೇಷವಾಗಿ ರೈತರ ಆದಾಯ ಹೆಚ್ಚಿಸಲು ಅಧಿಕ ಮೌಲ್ಯದ ಬೆಳೆಗಳಿಗೆ ವಿಶೇಷ ಆದ್ಯತೆ ನೀಡಲಾಗಿದ್ದು, ಉನ್ನತ ಮೌಲ್ಯದ ಬೆಳೆಗಳ ಕೃಷಿಗೆ ಬಜೆಟ್‌ನಲ್ಲಿ ಒತ್ತು ನೀಡಲಾಗಿದೆ. ಅದರಲ್ಲೂ ತೋಟಗಾರಿಕಾ ಬೆಳೆಗಳಾದ ತೆಂಗು, ಶ್ರೀಗಂಧ, ಗೋಡಂಬಿ ಮತ್ತು ಕೋಕೋ ಬೆಳೆಗಳ ಅಭಿವೃದ್ಧಿಗೆ ವಿಶೇಷ ಅನುದಾನ ಮೀಸಲಿಟ್ಟಿರುವುದು ನಮ್ಮ ಭಾಗದ ರೈತರ ಪಾಲಿಗೆ ಆಶಾದಾಯಕವಾಗಿದೆ ಎಂದಿದ್ದಾರೆ.

ಸಣ್ಣ ನಗರಗಳ ಸುಸ್ಥಿರ ಅಭಿವೃದ್ಧಿಗಾಗಿ ಹಮ್ಮಿಕೊಂಡಿರುವ ‘ಅಮೃತ ಯೋಜನೆ’ಯು ಪ್ರಾದೇಶಿಕ ಸಮತೋಲನಕ್ಕೆ ಹೆಚ್ಚಿನ ಶಕ್ತಿ ನೀಡಲಿದೆ. ನಮ್ಮ ಕರಾವಳಿ ಭಾಗದ ಮತ್ಸ್ಯ ಉದ್ಯಮಕ್ಕೆ ಹೆಚ್ಚಿನ ಉತ್ತೇಜನ ನೀಡಿರುವುದು ಹಾಗೂ ಪರಿಸರ ಸಮತೋಲನವನ್ನು ಕಾಯ್ದುಕೊಳ್ಳುವ ದೃಷ್ಟಿಯಿಂದ ಘೋಷಿಸಲಾದ ‘ಆಮೆ ಕಾರಿಡಾರ್’ ಯೋಜನೆಯು ಕರಾವಳಿಯ ನಿಸರ್ಗದತ್ತ ಸಂಪತ್ತಿನ ರಕ್ಷಣೆಗೆ ಪೂರಕವಾಗಿದೆ.

ವಿಶೇಷವಾಗಿ ಮಹಿಳಾ ಸಬಲೀಕರಣಕ್ಕೆ ಬಜೆಟ್‌ನಲ್ಲಿ ಹೆಚ್ಚಿನ ಒತ್ತು ನೀಡಲಾಗಿದ್ದು, ಇದಕ್ಕಾಗಿ ಘೋಷಿಸಲಾದ ವಿಶೇಷ ಯೋಜನೆಗಳು ಹಾಗೂ ಪ್ರತಿ ಜಿಲ್ಲೆಯಲ್ಲೂ ವಿದ್ಯಾರ್ಥಿನಿಯರಿಗಾಗಿ ವಸತಿ ನಿಲಯಗಳ ನಿರ್ಮಾಣದ ನಿರ್ಧಾರವು ಸ್ತ್ರೀ ಶಿಕ್ಷಣ ಮತ್ತು ಪ್ರಗತಿಗೆ ದೊಡ್ಡ ಬಲ ತುಂಬಲಿದೆ. ಮೆಡಿಕಲ್ ಟೂರಿಸಂ, ಆಯುರ್ವೇದ, ಸಾಂಸ್ಕೃತಿಕ ಪ್ರವಾಸೋದ್ಯಮ ಮತ್ತು ಕರ್ನಾಟಕದ ಕರಾವಳಿ ಭಾಗದ ಪ್ರವಾಸೋದ್ಯಮಕ್ಕೆ ನೀಡಿರುವ ವಿಶೇಷ ಒತ್ತು ನಮ್ಮ ರಾಜ್ಯದ ಪ್ರಗತಿಗೆ ವೇಗ ನೀಡಲಿದೆ. ದಿವ್ಯಾಂಗರಿಗಾಗಿ ಕೌಶಲ್ಯ ಅಭಿವೃದ್ಧಿ ಕಾರ್ಯಕ್ರಮಗಳು ಈ ಬಜೆಟ್‌ನ ಮಾನವೀಯ ಮುಖವನ್ನು ಪರಿಚಯಿಸಿವೆ.

 ಸಮಾಜದ ಕಟ್ಟಕಡೆಯ ವ್ಯಕ್ತಿಯ ಏಳಿಗೆಯನ್ನು ಗಮನದಲ್ಲಿಟ್ಟುಕೊಂಡು ರೂಪಿಸಲಾದ ಈ ಬಜೆಟ್ ‘ಸಬ್ ಕಾ ಸಾಥ್, ಸಬ್ ಕಾ ವಿಕಾಸ್’ ಮಂತ್ರಕ್ಕೆ ಹಿಡಿದ ಕನ್ನಡಿಯಾಗಿದೆ ಎಂದು ಕಾಗೇರಿ ತಿಳಿಸಿದ್ದಾರೆ.