Mangalore: ದಕ್ಷಿಣಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ನೆಲ್ಯಾಡಿ ನಿವಾಸಿ, ಉದ್ಯಮಿ ಬಿ.ಸುದೀಪ್ ರೈ (31) ಎಂಬಾತ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಪ್ರಕರಣ ಸಂಬಂಧಿಸಿ ಆತನ ಪತ್ನಿ ಕಾರ್ಕಳ ತಾಲೂಕಿನ ಕಜೆ ನಿವಾಸಿ ಸೌಮ್ಯ ಶೆಟ್ಟಿಯನ್ನು (28) ಕಾರ್ಕಳ ನಗರ ಪೊಲೀಸರು ಎಪ್ರಿಲ್ 11 ರಂದು ಸಂಜೆ ಉಡುಪಿಯಲ್ಲಿ ಬಂಧಿಸಿದ್ದಾರೆ.

ಈಕೆಯ ಗಂಡ ಸುದೀಪ್ ಶೆಟ್ಟಿ ಮಾ.17ರಂದು ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿ ಮಾ.29 ರಂದು ಮಂಗಳೂರು ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೆ ಸಾವನ್ನಪ್ಪಿದ್ದ. ಗಂಡ ಸುದೀಪ್ ವಿಷ ಸೇವಿಸಿದ ಏಳು ದಿನಗಳ ಕಾಲ ಆ ವಿಷಯವನ್ನು ಯಾರಿಗೂ ತಿಳಿಸದೇ ಮುಚ್ಚಿಟ್ಟಿದ್ದು ಮತ್ತು ಮದುವೆಯಾದ ಕೆಲವೇ ದಿನಗಳಲ್ಲಿ ಗಂಡನ ನಿಗೂಢ ಸಾವಿನ ಹಿಂದೆ ಸೌಮ್ಯಳ ಕೈವಾಡವಿದೆ ಎಂಬ ಸುದೀಪ್ ತಂದೆ ದಾಮೋದರ್ ಅವರ ದೂರಿನ ಮೇರೆಗೆ ಪೊಲೀಸರು ಈ ಕ್ರಮ ಕೈಗೊಂಡಿದ್ದಾರೆ.

ಪುತ್ತೂರು ಸಬ್ ರಿಜಿಸ್ಟ್ರಾರ್ ಕಚೇರಿಯಲ್ಲಿ ಕಾರ್ಕಳ ತಾಲೂಕಿನ ಕಜೆ ನಿವಾಸಿ ಸೌಮ್ಯ ಶೆಟ್ಟಿ ಜೊತೆ ಮನೆಮಂದಿಗೆ ಹೇಳದೆ ಸುದೀಪ್ ಫೆ.17 ರಂದು ವಿವಾಹ ನೋಂದಣಿ ಮಾಡಿಸಿಕೊಂಡಿದ್ದ ಎನ್ನಲಾಗಿದೆ.ಸುದೀಪ್ ಕಳೆದ ಕೆಲವು ವರ್ಷಗಳಿಂದ ಬೆಳ್ತಂಗಡಿ ತಾಲೂಕಿನಲ್ಲಿ SRN ಗ್ರೂಪ್ ಹೆಸರಿನಲ್ಲಿ ಎಲೆಕ್ಟ್ರಾನಿಕ್ ಹಾಗೂ ಸೋಲಾರ್ ಉದ್ಯಮವನ್ನು ಮಾಡಿಕೊಂಡಿದ್ದ. ಫೆಬ್ರುವರಿಯಲ್ಲಿ ರಿಜಿಸ್ಟರ್ ಮದುವೆ ಹಾಗೂ ಮಾರ್ಚ್‌ನಲ್ಲಿ ದೇವಸ್ಥಾನದಲ್ಲಿ ವಿವಾಹವಾಗಿದ್ದ ಈ ಜೋಡಿಯ ಸಂಸಾರ ಕೇವಲ ಎರಡೇ ವಾರಗಳಲ್ಲಿ ಆಸ್ಪತ್ರೆ ಮೆಟ್ಟಿಲೇರಿರುವುದು ಹಲವು ಅನುಮಾನಗಳಿಗೆ ದಾರಿ ಮಾಡಿಕೊಟ್ಟಿತ್ತು.

ಸುದೀಪ್ ಶೆಟ್ಟಿ ಸಾವಿನ ನಂತರ ಮಾಧ್ಯಮಗಳ ಮುಂದೆ ಬಂದು ಕಣ್ಣೀರು ಹಾಕುತ್ತಾ ಮಾತುಗಳನ್ನಾಡಿದ್ದ ಸೌಮ್ಯ ಶೆಟ್ಟಿ, ತನಗೂ ಗಂಡನ ಸಾವಿಗೂ ಸಂಬಂಧವಿಲ್ಲ ಎಂಬಂತೆ ನಾಟಕವಾಡಿದ್ದಳು. ಆದರೆ, ಪೊಲೀಸರು ತನಿಖೆಯ ವೇಳೆ ಸಿಕ್ಕಿದ ಹಲವು ಸಾಕ್ಷಿಗಳ ಹಿನ್ನೆಲೆ ಆಕೆಯನ್ನು ಬಂಧಿಸಿದ್ದಾರೆ.

ಗಂಡ ಸುದೀಪ್ ಕುಟುಂಬದ ಶ್ರೀಮಂತಿಕೆ ಮತ್ತು ಆತನ ಅಸಹಾಯಕತೆಯನ್ನು ಬಂಡವಾಳ ಮಾಡಿಕೊಂಡಿದ್ದಳು ಎನ್ನಲಾಗಿದ್ದು, ಆಕೆಯ ಹಿಂದಿನ ವಿವಾದಾತ್ಮಕ ಸಂಬಂಧಗಳು ಮತ್ತು ಹಣದ ವ್ಯವಹಾರಗಳ ಬಗ್ಗೆ ಪೊಲೀಸರಿಗೆ ಪ್ರಾಥಮಿಕ ತನಿಖೆಯಲ್ಲಿ ಮಹತ್ವದ ಸುಳಿವುಗಳು ಸಿಕ್ಕಿವೆ ಎನ್ನಲಾಗಿದೆ.

ಸುದೀಪ್ ವಿಷ ಸೇವಿಸುವಂತೆ ಪ್ರೇರೇಪಿಸಿದ ವಿಚಾರಗಳು ಯಾವುದು..? ಆತನಿಗೆ ವಿಷ ಉಣಿಸಲಾಯಿತೇ ? ಆತನೇ‌ ವಿಷ ಸೇವಿಸಿದನೇ ? ಅಥವಾ ಅನಿವಾರ್ಯವಾಗಿ ಆತ ವಿಷ ಸೇವಿಸುವಂತೆ ಮಾನಸಿಕ ಚಿತ್ರಹಿಂಸೆ ನೀಡಲಾಯಿತೇ ಎನ್ನುವ ಕುರಿತು ಉಡುಪಿಯಲ್ಲಿ ಸೌಮ್ಯ ಶೆಟ್ಟಿಯನ್ನು ವಶಕ್ಕೆ ಪಡೆದಿರುವ ತನಿಖಾ ತಂಡವು ತೀವ್ರ ವಿಚಾರಣೆ ನಡೆಸುತ್ತಿದೆ.

ಸೌಮ್ಯಾಳ ಹಳೇ ಅಫೇರ್‌ಗಳು ಮತ್ತು ಗಲಾಟೆಗಳ ಮಾಹಿತಿ ಪೊಲೀಸರಿಗೆ ಒಂದೊಂದಾಗಿ ದೊರಕಿದ್ದು, ಈ ಹಿನ್ನೆಲೆಯಲ್ಲಿ ಆಕೆಯನ್ನು ತೀವ್ರ ವಿಚಾರಣೆ ನಡೆಸಲು ಪೊಲೀಸರು ಮುಂದಾಗಿದ್ದಾರೆ. ಮಾಧ್ಯಮಗಳ ಮುಂದೆ ಕಣ್ಣೀರು ಸುರಿಸಿದ್ದ ಸೌಮ್ಯ ಶೆಟ್ಟಿ ನಿಜವಾಗಿಯೂ ನಿರಪರಾಧಿಯೋ ಅಥವಾ ಈ ಪ್ರಕರಣದ ಮಾಸ್ಟರ್ ಪ್ಲ್ಯಾನ್ ಆಕೆಯದ್ದೋ ಎಂಬುದು ಆಕೆಯ ವಿಚಾರಣೆಯ ಬಳಿಕ ತಿಳಿದುಬರಬೇಕಷ್ಟೇ.