Yellapur| ನಿನ್ನೆ ಬುಧವಾರ ಬೆಳಗ್ಗೆ ಯಲ್ಲಾಪುರದ ಅರಬೈಲ್ ಘಟ್ಟದ ರಾಷ್ಟ್ರೀಯ ಹೆದ್ದಾರಿಯಲ್ಲಿ ಚಾಲಕ ಸಮೇತ ಸುಟ್ಟು ಕರಕಲಾಗಿದ್ದ ಕಾರು ಹಾಗೂ ಸುಟ್ಟು ಮೃತಪಟ್ಟ ವ್ಯಕ್ತಿಯ ಬಗ್ಗೆ ಇನ್ನಷ್ಟು ಮಾಹಿತಿ ಲಭ್ಯವಾಗಿದೆ.

ಬೆಳಗಾವಿಯ ಕನಬರಗಿ ರಸ್ತೆಯ ಚಂದ್ರಮೌಳಿ ಕಾಲೋನಿಯ ನಿತೇಶ ಜಗನ್ನಾಥ ದಾಪಳೆ (35) ಎಂಬಾತನೆ ಕಾರಿನ ಜೊತೆ ಸುಟ್ಟು ಕರಕಲಾದ ವ್ಯಕ್ತಿ ಎನ್ನಲಾಗಿದೆ.

ನಿವೃತ್ತ ನೌಕರರಾಗಿರುವ ಮೃತ ವ್ಯಕ್ತಿಯ ತಂದೆ ಜಗನ್ನಾಥ ರಾಹು ಧಾಪಳೆ (65) ಯಲ್ಲಾಪುರ ಠಾಣೆಗೆ‌ ದೂರೊಂದು ನೀಡಿದ್ದು, ಕಾರು ನಂಬರ್ KA-04 MJ-8986 ತನ್ನ ಮಗನದ್ದು ಎಂದು ಗುರುತಿಸಿ, ಏ.8 ರ ಬೆಳಿಗ್ಗೆ 5 ರಿಂದ 7 ಗಂಟೆಯ ನಡುವಿನ ಅವಧಿಯಲ್ಲಿ ನೇದರ ಚಾಲಕ ಯಲ್ಲಾಪುರ ಕಡೆಯಿಂದ ಕಾರವಾರ ಕಡೆಗೆ ಕಾರನ್ನು ಅತಿವೇಗವಾಗಿ ಚಲಾಯಿಸಿಕೊಂಡು ಹೋಗುವಾಗ ಯಲ್ಲಾಪುರದ ತಾಳೆಕುಂಬ್ರಿ ಬಸ್ ಸ್ಟಾಫ್ ಎದುರು ರಸ್ತೆಯ ತಗ್ಗಿನಲ್ಲಿ ಅಪಘಾತವಾಗಿರಬಹುದು. ಅಪಘಾತದ ರಭಸಕ್ಕೆ ಕಾರಿಗೆ ಬೆಂಕಿ ತಾಗಿ ಕಾರು ಹಾಗೂ ಕಾರ್ ನಲ್ಲಿದ್ದ ತನ್ನ ಮಗ ನಿತೇಶನೋ ಅಥವಾ ಬೇರೆ ಯಾರೋ ವ್ಯಕ್ತಿ ಪೂರ್ಣ ಸುಟ್ಟು ಹೋಗಿದ್ದು, ಎಲುಬುಗಳು ಮಾತ್ರ ಉಳಿದಿದ್ದು, ಬೇರೆ ಯಾವುದೇ ಕುರುಹು ಕಂಡು ಬರುತ್ತಿಲ್ಲ ಎಂದು ದೂರು‌ ನೀಡಿದ್ದಾರೆ.

ಯಲ್ಲಾಪುರ ಪೋಲಿಸರು ಎಲ್ಲಾ ಆಯಾಮಗಳಲ್ಲೂ ತನಿಖೆ ಕೈಗೊಂಡಿದ್ದಾರೆ.