Karwar| ಬ್ಯಾನರ್ ವಿಚಾರವೊಂದು ಎರಡೂ ರಾಷ್ಟ್ರೀಯ ಪಕ್ಷಗಳ ಕಾರ್ಯಕರ್ತರ ನಡುವೆ ಕೈ ಕೈ ಮಿಲಾಯಿಸುವ ಹಂತಕ್ಕೆ ಹೋಗಿ ಕೊನೆಗೆ ಪೋಲಿಸರು ಮಧ್ಯಪ್ರವೇಶಿಸಿ ‘ಬಳ್ಳಾರಿ ಬ್ಯಾನರ್’ ಗಲಾಟೆಯಾಗದಂತೆ ಪರಿಸ್ಥಿತಿ ನಿಯಂತ್ರಿಸಿದ ಘಟನೆ ಸದಾಶಿವಗಡದ ರಾಷ್ಟ್ರೀಯ ಹೆದ್ದಾರಿ ಯ ಬಳಿ ನಡೆದಿದೆ.
ಚಿತ್ತಾಕುಲಾದಲ್ಲಿ ಶನಿವಾರ ಬಿಜೆಪಿ ಕಾರ್ಯಕರ್ತರ ಪ್ರಶಿಕ್ಷಣ ಸಭೆಯ ಹಿನ್ನಲೆಯಲ್ಲಿ ಶುಕ್ರವಾರ ರಾತ್ರಿ ಬಿಜೆಪಿ ಕಾರ್ಯಕರ್ತರು ಪಕ್ಷದ ಬ್ಯಾನರ್, ಧ್ವಜ, ಪತಾಕೆಗಳನ್ನು ಹಚ್ಚಿದ್ದರು. ಶಾಸಕ ಸತೀಶ ಸೈಲ್ ಮನೆ ಎದುರು ಬಿಜೆಪಿಯ ಪತಾಕೆ, ಧ್ವಜ ಹಚ್ಚಿದ್ದನ್ನು ಸೈಲ್ ಬೆಂಬಲಿಗರು, ಕಾಂಗ್ರೆಸ್ ಕಾರ್ಯಕರ್ತರು ಆಕ್ಷೇಪವೆತ್ತಿ, ತೆರವುಗೊಳಿಸುವಂತೆ ಅಧಿಕಾರಿಗಳ ಮೇಲೆ ಒತ್ತಡ ಹಾಕಿದಾಗ ಪ್ರಕರಣ ವಿಕೋಪಕ್ಕೆ ಹೋಗಿದೆ.
ಈ ವಿಚಾರಕ್ಕೆ ಬಿಜೆಪಿ ಹಾಗೂ ಕಾಂಗ್ರೆಸ್ ಕಾರ್ಯಕರ್ತರ ನಡುವೆ ಭಾರಿ ವಾದವಿವಾದಗಳು ನಡೆದಿದೆ. ಪೋಲಿಸರು ಬಿಜೆಪಿ ಕಾರ್ಯಕರ್ತರ ಮೇಲೆ ಒತ್ತಡ ಹಾಕಿ ಬಿಜೆಪಿ ಧ್ವಜ, ಪತಾಕೆ ತೆರವುಗೊಳಿಸುವಂತೆ ಒತ್ತಡ ಹಾಕಿದ್ದಾರೆ. ಈ ಸಂದರ್ಭದಲ್ಲಿ ಪೋಲಿಸರು ಅನುಚಿತ ವರ್ತನೆ ತೋರಿದ್ದಾರೆ ಎಂಬುದು ಬಿಜೆಪಿ ಕಾರ್ಯಕರ್ತರ ದೂರು.
ಆಗ ಕಾರ್ಯಕರ್ತರ ರಕ್ಷಣೆಗೆ ಸ್ಥಳಕ್ಕೆ ಆಗಮಿಸಿದ ಮಾಜಿ ಶಾಸಕಿ ರೂಪಾಲಿ ನಾಯ್ಕ, ಪೋಲಿಸರು ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿ, ಪಂಚಾಯಿತಿಯ ಪರವಾನಿಗೆ ಪಡೆದು ಪತಾಕೆ ಹಚ್ಚಲಾಗುತ್ತಿದೆ. ಶಾಸಕರ ಮನೆಯೆದುರು ಹಚ್ಚುತ್ತಿಲ್ಲ. ಸುಮ್ಮನೆ ರಾಜಕೀಯ ಮಾಡಲಾಗುತ್ತಿದೆ. ಪೋಲಿಸರು ರಾಜಕೀಯ ಒತ್ತಡಕ್ಕೆ ಮಣಿದಿದ್ದಾರೆ. ಯಾವುದೇ ಕಾರಣಕ್ಕೂ ಪತಾಕೆಗಳನ್ನು ತೆಗೆಯುವುದಿಲ್ಲ. ಪೋಲಿಸರು ಬಿಜೆಪಿ ಕಾರ್ಯಕರ್ತರ ಮೇಲಿನ ದಬ್ಬಾಳಿಕೆ ನಡೆಸಿದರೆ ಯಾವ ಕಾರಣಕ್ಕೂ ಸುಮ್ಮನಿರಲಾರೆ ಎಂದು ಅರ್ಭಟಿಸಿದ್ದಾರೆ.
ಪೋಲಿಸರ ಪಕ್ಷಪಾತದ ಬಗ್ಗೆ ಎಸ್ ಪಿ ದೀಪನ್ ಅವರಿಗೂ ಕರೆ ಮಾಡಿ ಪೋಲಿಸ ಅಧಿಕಾರಿಗಳ ಪಕ್ಷಪಾತ ವರ್ತನೆಯ ಬಗ್ಗೆ ದೂರಿದ್ದಾರೆ. ಆಗ ಎಸ್ಪಿಯವರು ಚಿತ್ತಾಕುಲ ಠಾಣೆ ಪಿಎಸ್ಸೈಗೆ ಕಾನೂನು ಪ್ರಕಾರ ನಡೆದುಕೊಳ್ಳುವಂತೆ ಕಟ್ಟುನಿಟ್ಟಾಗಿ ಸೂಚಿಸಿದ್ದಾರೆ.
ಅಧಿಕೃತ ಪರವಾನಿಗೆ ಪಡೆದು, ಪಕ್ಷದ ಪತಾಕೆಗಳನ್ನು ಹಚ್ಚಲಾಗಿದೆ. ಶಾಸಕರ ಮನೆ ದೂರದಲ್ಲಿ ಈ ಪತಾಕೆ, ಧ್ವಜ ಹಚ್ಚಲಾಗಿದೆ. ಆದಾಗ್ಯೂ ಶಾಸಕ ಸೈಲ್ ಇದನ್ನು ಯಾಕೆ ಪ್ರತಿಷ್ಠೆಯನ್ನಾಗಿ ಪಡೆದುಕೊಂಡರು? ಇದೆಲ್ಲವನ್ನೂ ಜನ ಗಮನಿಸುತ್ತಿದ್ದು, ಮುಂದಿನ ಚುನಾವಣೆಯಲ್ಲಿ ಇದೆಲ್ಲಕ್ಕೂ ಉತ್ತರಿಸಲಿದ್ದಾರೆ ಎಂಬುದು ಬಿಜೆಪಿ ಕಾರ್ಯಕರ್ತರು ಹೇಳಿಕೆ.
