ಕಾರವಾರ: ರಹದಾರಿ ಪತ್ರದ ಅವಧಿ ಮುಗಿದಿದ್ದರೂ (ಪರ್ಮಿಟ್) ಮಧ್ಯ ಸಾಗಣೆ ಮಾಡುತ್ತಿದ್ದ ಪ್ರಕರಣವನ್ನು ಅಬಕಾರಿ ಇಲಾಖೆ ಪತ್ತೆಹಚ್ಚಿದ್ದು, ಸುಮಾರು ₹35.5 ಲಕ್ಷ ಮೌಲ್ಯದ ಮಧ್ಯ ಮತ್ತು ವಾಹನವನ್ನು ವಶಕ್ಕೆ ಪಡೆದ ಘಟನೆ ಉತ್ತರ ಕನ್ನಡ ಜಿಲ್ಲೆಯ ಕಾರವಾರದ ಮಾಜಾಳಿ ಬಳಿ ನಡೆದಿದೆ.

ಮಾ.13 ರಂದು ರಾತ್ರಿ 11.55ರ ಸುಮಾರಿಗೆ ಮಾಜಾಳಿ ತನಿಖಾ ಠಾಣೆಯಲ್ಲಿ ಅಬಕಾರಿ ಸಿಬ್ಬಂದಿ, ಅಧಿಕಾರಿ ವಾಹನ ತಪಾಸಣೆ ನಡೆಸುತ್ತಿದ್ದರು. ಈ ವೇಳೆ ಮೈಸೂರು ನಿಂದ ಬಿಯರ್ ಹೊತ್ತು ಗೋವಾ ರಾಜ್ಯದತ್ತ‌ ಸಾಗುತ್ತಿದ್ದ KA-06 B-6025 ಸಂಖ್ಯೆಯ ವಾಹನವನ್ನು ರಾಷ್ಟ್ರೀಯ ಹೆದ್ದಾರಿ 66ರಲ್ಲಿ ತಡೆದು ಪರಿಶೀಲಿಸಲಾಯಿತು.

ಪರಿಶೀಲನೆ ವೇಳೆ ವಾಹನದಲ್ಲಿ ಸಾಗಿಸಲಾಗುತ್ತಿದ್ದ ಇಂಪೋರ್ಟ್ – ಎಕ್ಸ್‌ಪೋರ್ಟ್ ಮಧ್ಯದ ರಹದಾರಿ ಪತ್ರದ ಅವಧಿ ಮಾ.10 ರಂದೇ ಮುಕ್ತಾಯಗೊಂಡಿರುವುದು ಪತ್ತೆಯಾಯಿತು.

ಇದು ಕರ್ನಾಟಕ ಅಬಕಾರಿ ಕಾಯ್ದೆ ಹಾಗೂ ನಿಯಮಗಳ ಉಲ್ಲಂಘನೆಯಾಗಿರುವುದರಿಂದ, ವಾಹನದಲ್ಲಿದ್ದ ಒಟ್ಟು 1200 ರಟ್ಟಿನ ಪೆಟ್ಟಿಗೆಗಳ ಮಧ್ಯ ಅಂದರೇ ಸುಮಾರು ಹದಿನಾಲ್ಕು ಸಾವಿರ ಲೀಟರ್ ಬಿಯರ್ ಹಾಗೂ ವಾಹನ ಸೇರಿ ಅಂದಾಜು ₹35.5 ಲಕ್ಷ ಮೌಲ್ಯದ ವಸ್ತುಗಳನ್ನು ಅಬಕಾರಿ ಇಲಾಖೆ ವಶಕ್ಕೆ ಪಡೆದುಕೊಂಡು, ಕ್ರಮ ಕೈಗೊಂಡಿದ್ದಾರೆ.

ಈ ಮದ್ಯ ಸಾಗಿಸುತ್ತಿದ್ದ ವಾಹನ‌, ಬ್ರೇಕ್ ವೈಫಲ್ಯದ ಹಿನ್ನೆಲೆಯಲ್ಲಿ ಪರ್ಮಿಟ್ ಒಳಗೆ ಗೋವಾ ರಾಜ್ಯಕ್ಕೆ ಸಾಗಲು ವಿಳಂಬವಾಗಿದೆ ಎನ್ನಲಾಗಿದೆ.