ಉತ್ತರಕನ್ನಡ ಜಿಲ್ಲೆಯ ಹೊನ್ನಾವರದಲ್ಲಿ ಮತ್ತೆ ಜಾನುವಾರು ಮೇಲೆ ಚಿರತೆ ದಾಳಿ ಪ್ರಾರಂಭಗೊಂಡಿದೆ. ಸ್ಥಳೀಯರೊಬ್ಬರ ಆಕಳ ಮೇಲೆ ಎರಗಿದ ಚಿರತೆಯೊಂದು ಆಕಳಿನ ಹೊಟ್ಟೆ ಬಗೆದು ರಕ್ತ, ಮಾಂಸ ತಿಂದು ತೇಗಿದೆ.
ಹೊನ್ನಾವರ ಸಾಲ್ಕೋಡು ಗ್ರಾಮದ ಹೊಸಾರಮಕ್ಕಿಯ ನಿವಾಸಿ ಎಸ್.ಪಿ. ಶೆಟ್ಟಿ ಎಂಬವರಿಗೆ ಸೇರಿದ್ದ ಆಕಳು ಮೇಯಲು ಗುಡ್ಡದ ಬಳಿ ತೆರಳಿದ್ದ ವೇಳೆ ಚಿರತೆ ದಾಳಿ ಮಾಡಿದೆ. ಆಕಳಿನ ಹೊಟ್ಟೆ ಬಗೆದು ಮಾಂಸ, ರಕ್ತ ತಿಂದಿರುವ ಚಿರತೆ, ಉಳಿದ ಪಳೆಯುಳಿಕೆಗಳನ್ನು ಅಲ್ಲೇ ಬಿಟ್ಟು ಹೋಗಿದೆ.
ಇತ್ತ ತಮ್ಮ ಮನೆ ಆಕಳು ಹಿಂತಿರುಗಲು ಕಾಯುತ್ತಿದ್ದ ಎಸ್.ಪಿ.ಶೆಟ್ಟಿ ಮನೆಯವರು, ಸುತ್ತಮುತ್ತ ಹುಡುಕಾಡುತ್ತಿದ್ದಾಗ ಚಿರತೆ ತಿಂದು ಬಿಟ್ಟು ಹೋದ ತಮ್ಮ ಮನೆಯ ಆಕಳ ಪಳೆಯುಳಿಕೆ ಸಿಕ್ಕಿದೆ.
ತಾವು ಸಾಕಿದ್ದ ಆಕಳು ದಾರುಣವಾಗಿ ಸಾವಿಗೀಡಾಗಿದ್ದು ಕಂಡು ಅರಣ್ಯಾಧಿಕಾರಿಗಳಿಗೆ ದೂರು ನೀಡಿದ್ದಾರೆ. ಸ್ಥಳಕ್ಕೆ ಅರಣ್ಯಾಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಚಿರತೆಯನ್ನು ಹಿಡಿದು ಕಾಡಿಗೆ ಬಿಡುವ ಭರವಸೆ ನೀಡಿದ್ದಾರೆ.
