ಕಾರವಾರ: ಮಧ್ಯಪ್ರಾಚ್ಯದಲ್ಲಿ ಉಂಟಾಗಿರುವ ಬಿಕ್ಕಟ್ಟು ದೇಶದ ಇಂಧನ ಸರಬರಾಜಿನ ಮೇಲೂ ಪರಿಣಾಮ ಬೀರುತ್ತಿದ್ದು, ಹಲವೆಡೆ ಹೋಟೆಲ್‌ಗಳಲ್ಲಿ ಬಳಸುವ ವಾಣಿಜ್ಯ ಅಡುಗೆ ಅನಿಲ (ಎಲ್‌ಪಿಜಿ) ಸಿಲಿಂಡರ್ ಕೊರತೆ ಉಂಟಾಗುತ್ತಿದ್ದು, ವಾಣಿಜ್ಯ ಬಳಕೆಯ ಗ್ಯಾಸ್ ಸಿಲಿಂಡರ್‌ಗಳ ಸರಬರಾಜಿನಲ್ಲಿ ಕಳೆದ ಕೆಲವು ದಿನಗಳಿಂದ ವಿಳಂಬವಾಗುತ್ತಿರುವುದಾಗಿ ಹೋಟೆಲ್ ಮಾಲೀಕರು ತಿಳಿಸಿದ್ದಾರೆ.

ಈ ಬಗ್ಗೆ www.newswaveskannada.com ನೊಂದಿಗೆ ಕಾರವಾರದ ಸೋನಿ ಗ್ಯಾಸ್ ಏಜೆನ್ಸಿಯ ಸುನೀಲ್‌ ಸೋನಿ ಮಾತನಾಡಿ, ವೈದ್ಯಕೀಯ ‌ಹಾಗೂ ಶಿಕ್ಷಣ ಸಂಸ್ಥೆಗಳಿಗೆ‌ ಪ್ರಥಮ ಆದ್ಯತೆಯ ಮೇಲೆ ಸಿಲೆಂಡರ್ ಪೂರೈಸಲಾಗುತ್ತಿದೆ. ಇನ್ನು ವಾಣಿಜ್ಯ ಬಳಕೆಗೆ ಮಾತ್ರ ಅವರ ಬೇಡಿಕೆಯ ಅರ್ಧದಷ್ಟು ಪೂರೈಸುತ್ತಿದ್ದೇವೆ. ಗೃಹ ಬಳಕೆಗೆ ಇವರೆಗೆ ಯಾವುದೇ ನಿರ್ಬಂಧ, ಕಟ್ಟಳೆಗಳು‌ ಇಲ್ಲ. ಇನ್ನೆರಡು ದಿನಗಳಲ್ಲಿ ಈ ಬಗ್ಗೆ ಕಂಪನಿಯ ಸಭೆ ಇದ್ದು, ಅದು‌ ತೀರ್ಮಾನವಾಗುವ ನಿರೀಕ್ಷೆ ಇದೆ ಎಂದರು. 

  ಒಟ್ಟಾರೆ ದಿನನಿತ್ಯ ಅಡುಗೆ ಕಾರ್ಯಗಳಿಗೆ ಹೆಚ್ಚಿನ ಪ್ರಮಾಣದಲ್ಲಿ ಸಿಲಿಂಡರ್ ಬಳಸುವ ಹೋಟೆಲ್‌ಗಳು ಈಗ ಪೂರೈಕೆಯ ಕೊರತೆಯಿಂದ ಸಂಕಷ್ಟ ಎದುರಿಸುತ್ತಿವೆ. ಪರಿಣಾಮ ಹೋಟೆಲ್ ತಿಂಡಿ ತಿನಿಸುಗಳು ಬೆಲೆ ಹೆಚ್ಚಾಗಲಿದ್ದು, ಗ್ರಾಹಕರಿಗೆ‌ ಹೊರೆಯಾಗಲಿದೆ.

ಕೆಲವೆಡೆ ಹೋಟೆಲ್ ಮಾಲೀಕರು ಹೆಚ್ಚುವರಿ ಸಿಲಿಂಡರ್‌ಗಳನ್ನು ಮುಂಗಡವಾಗಿ ಸಂಗ್ರಹಿಸಲು ಪ್ರಯತ್ನಿಸುತ್ತಿದ್ದು, ಇದರಿಂದ ಮಾರುಕಟ್ಟೆಯಲ್ಲಿ ತಾತ್ಕಾಲಿಕವಾಗಿ ಸಹ ಕೊರತೆ ಹೆಚ್ಚಾಗಿದೆ.

ಮಧ್ಯಪ್ರಾಚ್ಯದಲ್ಲಿ ಉಂಟಾಗಿರುವ ಸ್ಥಿತಿ ಹಾಗೂ ಇಂಧನ ಸರಬರಾಜಿನ ಅಸ್ಥಿರತೆ ಜಾಗತಿಕ ಮಾರುಕಟ್ಟೆಯ ಮೇಲೂ ಪರಿಣಾಮ ಬೀರುತ್ತಿದ್ದು, ಅದರ ಪರಿಣಾಮವಾಗಿ ದೇಶದ ವಿವಿಧ ಭಾಗಗಳಲ್ಲಿ ಗ್ಯಾಸ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗುವ ಸಾಧ್ಯತೆ ಇದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಆದರೆ ಪರಿಸ್ಥಿತಿ ಶೀಘ್ರದಲ್ಲೇ ಸಾಮಾನ್ಯ ಸ್ಥಿತಿಗೆ ಬರಲಿದೆ ಎಂ‌ಬ  ವಿಶ್ವಾಸ ಕೇಂದ್ರ ಸರ್ಕಾರ ವ್ಯಕ್ತಪಡಿಸಿದೆ .

ಈ ನಡುವೆ ಹೋಟೆಲ್ ಉದ್ಯಮಿಗಳು ಸರಬರಾಜು ವ್ಯವಸ್ಥೆಯನ್ನು ಸುಗಮಗೊಳಿಸಲು ಸಂಬಂಧಪಟ್ಟ ಇಲಾಖೆ ಕ್ರಮ ಕೈಗೊಳ್ಳಬೇಕೆಂದು ಮನವಿ ಮಾಡಿದ್ದಾರೆ.