ಉತ್ತರಕನ್ನಡ ಜಿಲ್ಲೆಯ ಭಟ್ಕಳ ತಾಲೂಕಿನ ಇತಿಹಾಸ ಪ್ರಸಿದ್ದ ಶಕ್ತಿ ಕ್ಷೇತ್ರವಾದ ಸೋಡಿಗದ್ದೆ ಶ್ರೀ ಮಹಾಸತಿ ದೇವಿಯ ಜಾತ್ರಾ ಮಹೋತ್ಸವ ವಿಜೃಂಭಣೆಯಿಂದ ನಡೆಯಿತು. ಮೊದಲ ದಿನ ಹಾಲಹಬ್ಬ ಆಚರಿಸಿದ ಭಕ್ತರು, 2ನೇ ದಿನವಾದ ಸಂಪ್ರದಾಯದ ಕೆಂಡಸೇವೆ ಹರಕೆಯಲ್ಲಿ ಶ್ರದ್ಧಾ ಭಕ್ತಿಯಿಂದ ಪಾಲ್ಗೊಂಡಿದ್ದಾರೆ.
ಈ ಜಾತ್ರೆ ಒಟ್ಟು 9 ದಿನಗಳ ಕಾಲ ನಡೆಯಲಿದೆ. ಉತ್ತರಕನ್ನಡ ಜಿಲ್ಲೆಯ ಅತ್ಯಂತ ದೊಡ್ಡ ಜಾತ್ರೆಗಳಲ್ಲಿ ಒಂದಾದ ಭಟ್ಕಳದ ಸೋಡಿಗದ್ದೆ ಶ್ರೀ ಮಹಾಸತಿ ದೇವಿಯ ಜಾತ್ರೆಯಲ್ಲಿ ದೇವರ ಸಂಪ್ರದಾಯದ ಕೆಂಡಸೇವೆಯ ಹರಕೆಯನ್ನು ಸಾವಿರಕ್ಕೂ ಅಧಿಕ ಭಕ್ತರು ಸಲ್ಲಿಸಿದರು. ದೇವಸ್ಥಾನದ ಮುಂಭಾಗದ ಪ್ರಾಂಗಣದಲ್ಲಿ ಸಿದ್ಧಪಡಿಸಿದ ಆಳೆತ್ತರದ ಕಟ್ಟಿಗೆ ರಾಶಿಯಿಂದಾಗುವ ಕೆಂಡವನ್ನು ಹಾಯುವುದು ಕೂಡ ರೋಮಾಂಚಕಾರಿಯಾಗಿತ್ತು
ಈ ಸಂದರ್ಭದಲ್ಲಿ ಭಕ್ತರಿಂದ ಸೋಡಿಗದ್ದೆ ಶ್ರೀ ಮಹಾಸತಿ ದೇವಿಗೆ ಸಲ್ಲಿಸುವ ಹರಕೆಗಳಲ್ಲಿ ಸಂಪ್ರದಾಯದ ಕೆಂಡಸೇವೆ ಪ್ರಮುಖವಾದದು. ತಮ್ಮ ಕಷ್ಟ ಪರಿಹಾರವಾದಲ್ಲಿ ದೇವಿಗೆ ಕೆಂಡಸೇವೆ ಸಲ್ಲಿಸುವುದಾಗಿ ಹೇಳಿಕೊಂಡಿದ್ದ ಭಕ್ತರು, ಕೆಂಡದ ಮೇಲೆ ನಡೆಯುವ ಮೂಲಕ ಶ್ರದ್ದಾಭಕ್ತಿಯಿಂದ ಹರಕೆ ತೀರಿಸಿದರು. ಈ ಕೆಂಡಸೇವೆಯ ವಿಶೇಷವೆಂದರೆ ಭಕ್ತರ ಎಲ್ಲ ಕಷ್ಟ ಕಾರ್ಪಣ್ಯಗಳನ್ನು ಪರಿಹರಿಸುವುದಾಗಿದ್ದು, ಹರಕೆ ಹೊತ್ತ ಭಕ್ತರ ಅವರ ಸಮಸ್ಯೆ ಪರಿಹಾರವಾದ ನಂತರ ಈ ಜಾತ್ರೆಯ ಕೆಂಡ ಸೇವೆಯನ್ನು ಮಾಡುತ್ತಾರೆ.
ಮುಂದಿನ ದಿನದಲ್ಲಿ ಕುಟುಂಬಕ್ಕಾಗಲಿ, ವೈಯಕ್ತಿಕವಾಗಲಿ, ಯಾವುದೇ ಕಷ್ಟಬಾರದಿರಲಿ ಎಂದು ಬೇಡಿಕೊಳ್ಳುತ್ತಾರೆ. ಈಗಾಗಲೇ ಹರಕೆ ಹೊತ್ತು ತಮ್ಮ ಇಷ್ಟಾರ್ಥ ಸಿದ್ಧಿಸಿದ ಭಕ್ತರು ಪ್ರತಿ ವರ್ಷ ನಡೆಯುವ ಜಾತ್ರೆಗೆ ಬಂದು ಹರಕೆ ತೀರಿಸುತ್ತಾರೆ. ಸೋಡಿಗದ್ದೆ ಶ್ರೀ ಮಹಾಸತಿ ದೇವಿಯ ದೇವಸ್ಥಾನ ರಾಜ್ಯದಂತ್ಯ ಹೆಸರುವಾಸಿಯಾಗಿದ್ದು, ದಿನಾಲೂ ಸಾವಿರಾರರು ಭಕ್ತರು ದೇವಿಯ ಆರ್ಶೀವಾದ ಪಡೆಯಲು ಆಗಮಿಸುತ್ತಿದ್ದಾರೆ. ಜಾತ್ರೆಯ ಕೆಂಡ ಸೇವೆಗೆ, ಬರುವಂತಹ ಎಲ್ಲ ಭಕ್ತರಿಗೆ ದೇವಸ್ಥಾನದಲ್ಲಿ ಸಾಕಷ್ಟು ಸ್ವಯಂ ಸೇವಕರು ಎಲ್ಲಾ ರೀತಿಯ ವ್ಯವಸ್ಥೆ ಕಲ್ಪಿಸಿದ್ದು, ಭಕ್ತರಿಗಾಗಿ ಮಜ್ಜಿಗೆ, ಪಾನಕವನ್ನು ವಿತರಿಸಿದ್ದಾರೆ. ಇನ್ನು ಹರಕೆ ತೀರಿಸಿದ ಸಾವಿರಾರು ಭಕ್ತರು ದೇವಿಯ ಆರ್ಶೀವಾದ ಪಡೆದರು.
