Karwar| ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಜಿಲ್ಲೆಗೆ ಆಗಮಿಸಿದ್ದಾಗ, ಜನತೆಯ ಜ್ವಲಂತ ಸಮಸ್ಯೆಗಳ ಕುರಿತು ಮಾತನಾಡದ‌ ಬಗ್ಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿರುವ ಬಿಜೆಪಿ ಅವರ ಪ್ರವಾಸದ ಫಲಶ್ರುತಿ ಏನು ಎಂದು ಪ್ರಶ್ನಿಸಿದೆ.

ಈ ಬಗ್ಗೆ ಬಿಜೆಪಿ ಜಿಲ್ಲಾ‌ ವಕ್ತಾರ
ಸದಾನಂದ ಭಟ್ ನಿಡುಗೋಡ್, ಜಿಲ್ಲೆಯಲ್ಲಿ ಬಹು ಚರ್ಚಿತವಾಗಿ ಜನರ ತೀವ್ರ ವಿರೋಧಕ್ಕೆ ಕಾರಣವಾದ ನದಿ ತಿರುವು ಯೋಜನೆಗಳು, ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆ, ಬಂದರು ಕಾಮಗಾರಿ, ಅರಣ್ಯ ಅತಿಕ್ರಮಣ ಸಮಸ್ಯೆ ಮತ್ತು ಎಲೆ ಚುಕ್ಕೆ ರೋಗದಿಂದ ಸಂಕಷ್ಟದಲ್ಲಿರುವ ರೈತರ ವಿಚಾರಗಳನ್ನು ಪ್ರಸ್ತಾಪ ಮಾಡದಿರುವುದನ್ನು ತೀವ್ರವಾಗಿ ಆಕ್ಷೇಪಿಸಿದ್ದಾರೆ.

ಮುಖ್ಯಮಂತ್ರಿಗಳ ಪ್ರವಾಸ ಕೇವಲ ರಾಜಕೀಯ ಉದ್ದೇಶಗಳಿಗಾಗಿತ್ತು ಎಂದು ಟೀಕಿಸಿರುವ ಅವರು, ಜಿಲ್ಲೆಯ ಜನತೆಯ ಗಂಭೀರ ಸಮಸ್ಯೆಗಳ ಕುರಿತಾಗಲಿ, ಸಮಗ್ರ ಅಭಿವೃದ್ಧಿಯ ಕುರಿತಾಗಲಿ ಯಾವುದೇ ಮಾತನಾಡದೆ, ಕೇವಲ ರಾಜಕೀಯ ಉದ್ದೇಶಕ್ಕಾಗಿ ಬಿಜೆಪಿಯನ್ನು ಟೀಕಿಸುವ ಉದ್ದೇಶಕ್ಕೆ ಪ್ರವಾಸ ಮಾಡಿದ್ದಾರೆ‌ ಎಂದು ಕುಟುಕಿದ್ದಾರೆ.

ಉಸ್ತುವಾರಿ ಸಚಿವರು ಮತ್ತು ಕಾಂಗ್ರೆಸ್ ಶಾಸಕರುಗಳು ಜಿಲ್ಲೆಯ ಜ್ವಲಂತ ಸಮಸ್ಯೆಗಳ ಕುರಿತು ಮುಖ್ಯಮಂತ್ರಿಗಳಿಗೆ ತಿಳಿಸಿ, ಯಾವ ಮನವಿ ನೀಡಿದ್ದಾರೆ ಎಂಬ‌ ಬಗ್ಗೆ ತಿಳಿಸುವಂತೆ ಆಗ್ರಹಿಸಿದ್ದಾರೆ.

ಹಿಂದಿನ ಬಿಜೆಪಿ ಕಾಂಗ್ರೆಸ್ ಸರಕಾರಗಳ ಕಾಲದಿಂದ ಆರಂಭಗೊಂಡು ನಡೆದ ಕಾಮಗಾರಿಗಳ ಉದ್ಘಾಟನೆ ಮಾಡಿ ಅಭಿವೃದ್ಧಿ ಎಲ್ಲವನ್ನೂ ಕೇವಲ ಕಾಂಗ್ರೆಸ್ ಮಾತ್ರ ಮಾಡಿದೆ ಎನ್ನುವ ರೀತಿಯಲ್ಲಿ ಮುಖ್ಯಮಂತ್ರಿಗಳು ಉಪಮುಖ್ಯಮಂತ್ರಿಗಳು ಮಾತನಾಡಿದ್ದು ಕೇವಲ ರಾಜಕೀಯ ಉದ್ದೇಶಗಳಿಗೆ ಎನ್ನುವುದು ಸ್ಪಷ್ಟ.

 ಅಲ್ಲದೇ ಬರುವ ಬಜೆಟ್ ನಲ್ಲಿ ಜಿಲ್ಲೆಯಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯನ್ನು ಸ್ಥಾಪಿಸುತ್ತೇವೆ ಎಂದಿರುವುದು ಸ್ವಾಗತಾರ್ಹವಾದರೂ, ಕಾರವಾರದ ಕ್ರಿಮ್ಸ್ ಆಸ್ಪತ್ರೆ ಮತ್ತು ಶಿರಸಿಯ ಪಂಡಿತ್ ಜನರಲ್ ಆಸ್ಪತ್ರೆಗಳಿಗೆ ಅಗತ್ಯವಾದ ವೈದ್ಯಕೀಯ ಉಪಕರಣಗಳು ಮತ್ತು ನುರಿತ ವೈದ್ಯರುಗಳ ನಿಯೋಜನೆಯನ್ನು ಮಾಡದೆ ಕೇವಲ ಬಜೆಟ್ ನಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯನ್ನು ಸ್ಥಾಪಿಸುತ್ತೇವೆ ಎಂದು ಘೋಷಿಸುವುದು ಜಿಲ್ಲೆಯ ಜನರ ಮೂಗಿಗೆ ತುಪ್ಪ ಸವರುವ ಕೆಲಸ ಆಗಬಾರದು. ಜಿಲ್ಲೆಯ ಎಲ್ಲಾ ಜನರಿಗೆ ಅನುಕೂಲವಾಗುವ ರೀತಿಯಲ್ಲಿ ಕಾಲಮಿತಿಯಲ್ಲಿ ವೈದ್ಯಕೀಯ ಸೇವೆ ದೊರಕುವಂತಹ ಕ್ರಮ ಕೈಗೊಳ್ಳಬೇಕು‌ ಎಂದು ಆಗ್ರಹಿಸಿದ್ದಾರೆ.

ಇನ್ನಾದರೂ ಜಿಲ್ಲೆಯ ಕಾಂಗ್ರೆಸ್ ಶಾಸಕರು, ಸಚಿವರು ರಾಜ್ಯ ಸರಕಾರಕ್ಕೆ ಜಿಲ್ಲೆಯ ಜನವಿರೋಧಿ ಯೋಜನೆಗಳ ಕುರಿತು ತಿಳಿಸಿ, ಯೋಜನೆಗಳ ಡಿಪಿಆರನ್ನು ಕೂಡಲೇ ಕೈಬಿಡಲು ಆಗ್ರಹಿಸಲಿ ಹಾಗೂ ರಾಜ್ಯ ಬಜೆಟ್ ನಲ್ಲಿ ಜಿಲ್ಲೆಗೆ ನ್ಯಾಯ ದೊರಕುವಂತೆ ಮಾಡಲಿ ಎಂದು ಬಿಜೆಪಿ ಜಿಲ್ಲಾ ವಕ್ತಾರರು ಪ್ರಕಟಣೆಯಲ್ಲಿ ಒತ್ತಾಯಿಸಿದ್ದಾರೆ.