ಮುಂಡಗೋಡ: ಅನಧಿಕೃತವಾಗಿ ಹಣಕಾಸು ವ್ಯವಹಾರ ನಡೆಸಿ ಸಹಕಾರಿ ಕಾಯ್ದೆಯನ್ನು ಉಲ್ಲಂಘಿಸಿದ ಆರೋಪದಡಿ ಮುಂಡಗೋಡದ ವ್ಯಕ್ತಿಯೊಬ್ಬರ ವಿರುದ್ಧ ಪ್ರಕರಣ ದಾಖಲಾಗಿದೆ.

ಮುಂಡಗೋಡದ ಅಹ್ಮದ್‌ ಲೇಔಟ್‌ನ ತೌಸಿಫ್ ಮಹಬೂಬಸಾಬ ಪಣಿ ಬಂದ ಎಂಬಾತನೇ ಅನಧಿಕೃತ ಹಣಕಾಸು ವಹಿವಾಟು ನಡೆಸಿದ ಆರೋಪಿ. ಪೊಲೀಸರ ಮಾಹಿತಿ ಪ್ರಕಾರ, ಮುಂಡಗೋಡ ತಾಲೂಕಿನಲ್ಲಿ ಕಾನೂನುಬಾಹಿರ ಚಟುವಟಿಕೆಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಶಿರಸಿ ಉಪವಿಭಾಗದ ಪೊಲೀಸ್ ಉಪಾಧೀಕ್ಷಕರ ಸೂಚನೆಯಂತೆ ಯಲ್ಲಾಪುರ ಪೊಲೀಸ್ ಠಾಣೆಯ ಪಿಎಸ್‌ಐ ಮಹಾವೀರ ಕಾಂಬಳೆ ಅವರು ಆರೋಪಿ ಮನೆಯ ಶೋಧನೆಗೆ ನ್ಯಾಯಾಲಯದಿಂದ ಶೋಧನಾ ವಾರಂಟ್ ಪಡೆದುಕೊಂಡಿದ್ದರು.

ಕಳೆದ ತಿಂಗಳು ಜೂನ್ 24, 2026ರಂದು ಬೆಳಿಗ್ಗೆ ಆರೋಪಿ ಮನೆಯಲ್ಲಿ ಶೋಧನೆ ನಡೆಸಿದ ವೇಳೆ ಹಣಕಾಸು ವ್ಯವಹಾರಕ್ಕೆ ಸಂಬಂಧಿಸಿದ ಕೆಲವು ದಾಖಲೆಗಳು ಪತ್ತೆಯಾಗಿ, ಅವುಗಳನ್ನು ಜಪ್ತಿ ಮಾಡಲಾಗಿತ್ತು. ಬಳಿಕ ಜಪ್ತಿ ದಾಖಲೆಗಳನ್ನು ಪರಿಶೀಲನೆಗಾಗಿ ಸಹಕಾರಿ ಸಂಘಗಳ ಸಹಾಯಕ ನಿಬಂಧಕರ ಕಚೇರಿಗೆ ಕಳುಹಿಸಲಾಗಿತ್ತು.
ದಾಖಲೆಗಳ ಪರಿಶೀಲನೆಯ ನಂತರ ಆರೋಪಿ ಅನಧಿಕೃತವಾಗಿ ಹಣಕಾಸು ವ್ಯವಹಾರ ನಡೆಸಿರುವುದು ಹಾಗೂ ಸಂಬಂಧಿತ ಕಾನೂನು ಉಲ್ಲಂಘಿಸಿರುವುದು ಕಂಡುಬಂದಿದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಸಹಕಾರಿ ಸಂಘಗಳ ಸಹಾಯಕ ನಿಬಂಧಕ ರಾಮನಗೌಡ ಪಾಟೀಲ್ ಅವರು ನೀಡಿದ ದೂರಿನ ಮೇರೆಗೆ ಈ ಕ್ರಮ ಕೈಗೊಳ್ಳಲಾಗಿದೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆರೋಪಿಯ ಹಣಕಾಸು ವಹಿವಾಟಿನ ತನಿಖೆ ಕೈಗೊಂಡಿದ್ದಾರೆ.