ದಾಂಡೇಲಿ: ದಾಂಡೇಲಿ ಗ್ರಾಮೀಣ ಪೊಲೀಸ್ ಠಾಣೆ ವ್ಯಾಪ್ತಿಯ ಹಳಿಯಾಳ–ದಾಂಡೇಲಿ ರಸ್ತೆಯ ಅಜಗಾಂವ ಸಮೀಪ ಭಾನುವಾರ ತಡರಾತ್ರಿ ಎರಡು ಕಾರುಗಳ ನಡುವೆ ಸಂಭವಿಸಿದ ಮುಖಾಮುಖಿ ಡಿಕ್ಕಿಯಲ್ಲಿ ನಾಲ್ವರು ಗಾಯಗೊಂಡಿದ್ದು, ಎರಡೂ ವಾಹನಗಳು ಜಖಂಗೊಂಡಿವೆ.

ದಾಂಡೇಲಿಯಿಂದ ಹಳಿಯಾಳ ಕಡೆಗೆ ತೆರಳುತ್ತಿದ್ದ ಯಡೋಗಾ ಗ್ರಾಮದ ಸ್ವಿಫ್ಟ್ ಕಾರು ಹಾಗೂ ಹಳಿಯಾಳದಿಂದ ದಾಂಡೇಲಿ ಕಡೆಗೆ ಬರುತ್ತಿದ್ದ ಗದಗ ಮೂಲದ ಕ್ವಾಲಿಸ್ ಕಾರಿನ ನಡುವೆ ಈ ಅಪಘಾತ ಸಂಭವಿಸಿದೆ. ಡಿಕ್ಕಿಯ ಪರಿಣಾಮ ಎರಡೂ ವಾಹನಗಳಿಗೆ ಹಾನಿಯಾಗಿದ್ದು, ಕಾರುಗಳಲ್ಲಿದ್ದ ನಾಲ್ವರು ಗಾಯಗೊಂಡಿದ್ದಾರೆ.

ಅಪಘಾತದ ಮಾಹಿತಿ ತಿಳಿಯುತ್ತಿದ್ದಂತೆಯೇ ದಾಂಡೇಲಿ ಗ್ರಾಮೀಣ ಪೊಲೀಸ್ ಠಾಣೆಯ ಪಿಎಸ್ಐ ಶಿವಾನಂದ ನಾವದಗಿ ಅವರು ಸಿಬ್ಬಂದಿಯೊಂದಿಗೆ ಸ್ಥಳಕ್ಕೆ ಆಗಮಿಸಿ ಗಾಯಾಳುಗಳನ್ನು ದಾಂಡೇಲಿಯ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಿ ಪ್ರಾಥಮಿಕ ಚಿಕಿತ್ಸೆ ಕೊಡಿಸಿದರು.

ಘಟನಾ ಸ್ಥಳಕ್ಕೆ ಹಳಿಯಾಳ ಪೊಲೀಸ್ ಠಾಣೆಯ ಪಿಎಸ್ಐ ಕೃಷ್ಣಗೌಡ ಅರಕೇರಿ ಅವರು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಅಪಘಾತಕ್ಕೆ ಸಂಬಂಧಿಸಿದಂತೆ ದಾಂಡೇಲಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಹೆಚ್ಚಿನ ತನಿಖೆ ಮುಂದುವರಿದಿದೆ.