ದಾಂಡೇಲಿ: ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚು ಲೈಕ್‌ಗಳು ಮತ್ತು ವೀಕ್ಷಣೆಗಳನ್ನು ಪಡೆಯುವ ಉದ್ದೇಶದಿಂದ ಚಲಿಸುತ್ತಿದ್ದ ತೂಫಾನ್ ಕ್ರೂಸರ್ ವಾಹನದ ಬಾಯನೇಟ್ ಹಾಗೂ ಮೇಲ್ಛಾವಣಿ (ಟಾಪ್) ಮೇಲೆ ಕುಳಿತು ಅಪಾಯಕಾರಿ ಸಾಹಸ ಪ್ರದರ್ಶಿಸಿ ವಿಡಿಯೋ ಚಿತ್ರೀಕರಿಸಿ ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ 12 ಮಂದಿಯ ವಿರುದ್ಧ ದಾಂಡೇಲಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪೊಲೀಸರ ಮಾಹಿತಿ ಪ್ರಕಾರ, ಕೆಎ-24/ಎ-0450 ನೋಂದಣಿ ಸಂಖ್ಯೆಯ ತೂಫಾನ್ ಕ್ರೂಸರ್ ವಾಹನವನ್ನು ಪರಿಶೀಲಿಸಿದ ವೇಳೆ, ಚಾಲಕನು ವಾಹನದ ಬಾಯನೇಟ್ ಹಾಗೂ ಮೇಲ್ಛಾವಣಿಯ ಮೇಲೆ ಸುಮಾರು 10 ರಿಂದ 12 ಯುವಕರನ್ನು ಕುಳ್ಳಿರಿಸಿಕೊಂಡು, ಸಾರ್ವಜನಿಕರ ಹಾಗೂ ಪ್ರಯಾಣಿಕರ ಜೀವಕ್ಕೆ ಅಪಾಯವಾಗುವ ರೀತಿಯಲ್ಲಿ ನಿರ್ಲಕ್ಷ್ಯದಿಂದ ವಾಹನ ಚಲಾಯಿಸಿರುವುದು ಬೆಳಕಿಗೆ ಬಂದಿದೆ.

ಈ ಘಟನೆ ಜೋಯಿಡಾ ತಾಲೂಕಿನ ಪ್ರಧಾನಿ ಗ್ರಾಮದ ಇನ್‌ಫಿನಿಟಿ ಹೋಂಸ್ಟೇ ಸಮೀಪ ನಡೆದಿದ್ದು, ಅದರ ವಿಡಿಯೋವನ್ನು pradeep_pojeri ಹೆಸರಿನ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಳ್ಳಲಾಗಿತ್ತು. ಸಾಮಾಜಿಕ ಜಾಲತಾಣಗಳಲ್ಲಿ ಪ್ರಸಿದ್ಧಿ ಪಡೆಯುವ ಉದ್ದೇಶದಿಂದ ಜೀವಕ್ಕೆ ಅಪಾಯ ಉಂಟುಮಾಡುವ ರೀತಿಯ ಸ್ಟಂಟ್ ನಡೆಸಿರುವುದು ಕಂಡುಬಂದ ಹಿನ್ನೆಲೆಯಲ್ಲಿ, ದಾಂಡೇಲಿ ಗ್ರಾಮೀಣ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.

ಪೊಲೀಸರು ಸಾರ್ವಜನಿಕರಿಗೆ ಎಚ್ಚರಿಕೆ ನೀಡಿದ್ದು, ಲೈಕ್‌, ವ್ಯೂಸ್‌ ಮತ್ತು ಫಾಲೋವರ್ಸ್‌ಗಾಗಿ ಜೀವಕ್ಕೆ ಅಪಾಯ ಉಂಟುಮಾಡುವ ಸಾಹಸಗಳಿಗೆ ಮುಂದಾಗಬಾರದು. ಇಂತಹ ಕೃತ್ಯಗಳು ಕಾನೂನು ಕ್ರಮಕ್ಕೆ ಕಾರಣವಾಗುವ ಜೊತೆಗೆ ಅಮೂಲ್ಯ ಜೀವಕ್ಕೂ ಅಪಾಯ ಉಂಟುಮಾಡಬಹುದು ಎಂದು ಮನವಿ ಮಾಡಿದ್ದಾರೆ.