ಮುಂಡಗೋಡ: ಸಾಲದ ಹೊರೆಗೆ ಹೆದರಿ ಯುವ ರೈತನೊಬ್ಬ ಕ್ರಿಮಿನಾಶಕ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಘಟನೆ ತಾಲೂಕಿನ ಕರವಳ್ಳಿ ಗ್ರಾಮದಲ್ಲಿ ನಡೆದಿದೆ.

ತಾಲೂಕಿನ ಚವಡಳ್ಳಿ ನಿವಾಸಿ ಹನುಮಂತ ಯಲ್ಲಪ್ಪ ಭದ್ರಾಪೂರ (30) ಎಂಬ ಯುವ ರೈತನೇ ಆತ್ಮಹತ್ಯೆಗೆ ಶರಣಾದ ದುರ್ದೈವಿ. ಮೃತ ಹನುಮಂತ ತಮ್ಮ ತಾಯಿಯ ಹೆಸರಿನಲ್ಲಿದ್ದ ಜಮೀನಿನಲ್ಲಿ ಕೃಷಿ ಮಾಡಿ, ವ್ಯವಸಾಯದ ವೆಚ್ಚಕ್ಕಾಗಿ ಚವಡಳ್ಳಿ-ಮಲವಳ್ಳಿ ಗ್ರೂಪ್ ಸೇವಾ ಸಹಕಾರಿ ಸಂಘದಲ್ಲಿ 1,49,000 ರೂ. ಬೆಳೆ ಸಾಲವನ್ನೂ ಪಡೆದುಕೊಂಡಿದ್ದ ಎನ್ನಲಾಗಿದೆ. ಆದರೆ ಈ ಬಾರಿಯ ಮುಂಗಾರು ಕೈಕೊಟ್ಟ ಹಿನ್ನೆಲೆಯಲ್ಲಿ ಹಾಗೂ ಅಂತರ್ಜಲ ಕುಸಿದು ಬೋರ್‌ವೆಲ್‌ನಲ್ಲೂ ನೀರಿಲ್ಲದ ಕಾರಣ, ಅವರು ಜಮೀನಿನಲ್ಲಿ ಶ್ರಮಪಟ್ಟು ಬೆಳೆದಿದ್ದ ಬೆಳೆಯು ಕಣ್ಣೆದುರೇ ಸಂಪೂರ್ಣವಾಗಿ ಒಣಗಿ ಹೋಗಿತ್ತು. ಕೈಗೆ ಬರಬೇಕಿದ್ದ ಬೆಳೆ ನಾಶವಾದ್ದರಿಂದ ತೀವ್ರ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದದ್ದರಿಂದ ಹಾಗೂ ಸಹಕಾರಿ ಸಂಘದ ಸಾಲದ ಮರುಪಾವತಿ ಬಗ್ಗೆ ಚಿಂತೆಗೊಳಗಾಗಿದ್ದ ಎನ್ನಲಾಗಿದೆ.

ಈ ವಿಷಯವನ್ನೇ ಮನಸ್ಸಿಗೆ ಹಚ್ಚಿಕೊಂಡರು ಜುಲೈ 17ರಂದು ಮಧ್ಯಾಹ್ನ ತಮ್ಮ ಹೊಲಕ್ಕೆ ತೆರಳಿದ್ದ ಹನುಮಂತ, ಅಲ್ಲಿಯೇ ಕ್ರಿಮಿನಾಶಕ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ತಕ್ಷಣವೇ ಗಮನಿಸಿದ ಕುಟುಂಬಸ್ಥರು ಅವರನ್ನು ಮುಂಡಗೋಡ ತಾಲೂಕು ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದರು. ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ರವಾನಿಸಲಾಗಿತ್ತಾದರೂ, ಚಿಕಿತ್ಸೆ ಫಲಕಾರಿಯಾಗದೆ ಜುಲೈ 20ರ ಬೆಳಗಿನ ಜಾವ ಅವರು ಕೊನೆಯುಸಿರೆಳೆದಿದ್ದಾರೆ.

ಘಟನೆಗೆ ಸಂಬಂಧಿಸಿದಂತೆ ಮೃತರ ಸಹೋದರ ಮುಂಡಗೋಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದು, ಪೋಲಿಸರು ತನಿಖೆ ಕೈಗೊಂಡಿದ್ದಾರೆ.