ಕಾರವಾರದ ಕದಂಬ ನೌಕಾನೆಲೆಯಲ್ಲಿ ನಡೆಯಲಿರುವ ಸಮಾರಂಭದಲ್ಲಿ ಸ್ವದೇಶಿ ತಂತ್ರಜ್ಞಾನದ ಅತ್ಯಾಧುನಿಕ ‘ಸಬ್‌ಮೆರಿನ್ ಹಂಟರ್’ ಯುದ್ಧನೌಕೆ ಸೇರ್ಪಡೆ

ಕಾರವಾರ: ಭಾರತೀಯ ನೌಕಾಪಡೆಯ ಸಾಮರ್ಥ್ಯವನ್ನು ಮತ್ತಷ್ಟು ಬಲಪಡಿಸುವ ಮಹತ್ವದ ಹೆಜ್ಜೆಯಾಗಿ, ಸ್ವದೇಶಿ ತಂತ್ರಜ್ಞಾನದಲ್ಲಿ ನಿರ್ಮಿತ ಅತ್ಯಾಧುನಿಕ ಆ್ಯಂಟಿ-ಸಬ್‌ಮೆರಿನ್ ವಾರ್ಫೇರ್ ಶ್ಯಾಲೋ ವಾಟರ್ ಕ್ರಾಫ್ಟ್ (ASW-SWC) ‘INSಮಾಲ್ವಣ್’ ಯುದ್ಧನೌಕೆ ಬುಧವಾರ (ಜುಲೈ 22) ಕಾರವಾರದ ಕದಂಬ ನೌಕಾನೆಲೆಯಲ್ಲಿ ನಡೆಯಲಿರುವ ವಿಶೇಷ ಸಮಾರಂಭದಲ್ಲಿ ಅಧಿಕೃತವಾಗಿ ಭಾರತೀಯ ನೌಕಾಪಡೆಗೆ ಸೇರ್ಪಡೆಗೊಳ್ಳಲಿದೆ.

 ಭಾರತ ಸರ್ಕಾರದ ‘ಆತ್ಮನಿರ್ಭರ ಭಾರತ’ ಪರಿಕಲ್ಪನೆಗೆ ಮತ್ತೊಂದು ಬಲ ತುಂಬುವ ಈ ಯುದ್ಧನೌಕೆಯನ್ನು ಕೊಚ್ಚಿನ್ ಶಿಪ್‌ಯಾರ್ಡ್ ಲಿಮಿಟೆಡ್ (CSL), ಕೊಚ್ಚಿಯಲ್ಲಿ ಸಂಪೂರ್ಣವಾಗಿ ಭಾರತೀಯ ನೌಕಾಪಡೆಯ ಅಗತ್ಯಗಳಿಗೆ ಅನುಗುಣವಾಗಿ ವಿನ್ಯಾಸಗೊಳಿಸಿ ನಿರ್ಮಿಸಲಾಗಿದೆ. ಭಾರತೀಯ ನೌಕಾಪಡೆಗೆ ಸೇರ್ಪಡೆಯಾಗಲಿರುವ ಒಟ್ಟು ಎಂಟು ASW-SWC ಯುದ್ಧನೌಕೆಗಳ ಪೈಕಿ ಇದು ಎರಡನೇ ನೌಕೆಯಾಗಿದ್ದು, 2026ರ ಮಾರ್ಚ್ 31ರಂದು ನೌಕಾಪಡೆಗೆ ಹಸ್ತಾಂತರಿಸಲಾಗಿತ್ತು.

ಕರಾವಳಿ ರಕ್ಷಣೆಗೆ ಅತ್ಯಾಧುನಿಕ ‘ಸಬ್‌ಮೆರಿನ್ ಹಂಟರ್’: ಸುಮಾರು 80 ಮೀಟರ್ ಉದ್ದ ಹಾಗೂ 1,100 ಟನ್ ಸ್ಥಳಾಂತರ ಸಾಮರ್ಥ್ಯ ಹೊಂದಿರುವ ಐಎನ್‌ಎಸ್ ಮಾಲ್ವಣ್, ಕರಾವಳಿ ಪ್ರದೇಶಗಳಲ್ಲಿ ಶತ್ರುಗಳ ಜಲಾಂತರ್ಗಾಮಿ ನೌಕೆಗಳನ್ನು ಪತ್ತೆಹಚ್ಚಿ ನಾಶಪಡಿಸಲು ವಿಶೇಷವಾಗಿ ವಿನ್ಯಾಸಗೊಳಿಸಲಾಗಿದೆ. ವಾಟರ್‌ಜೆಟ್ ಚಾಲನಾ ವ್ಯವಸ್ಥೆ ಹೊಂದಿರುವ ಈ ಯುದ್ಧನೌಕೆಯಲ್ಲಿ ಟಾರ್ಪಿಡೊಗಳು, ಬಹುಉದ್ದೇಶದ ಆ್ಯಂಟಿ-ಸಬ್‌ಮೆರಿನ್ ರಾಕೆಟ್‌ಗಳು, ಅತ್ಯಾಧುನಿಕ ರಾಡಾರ್, ಸೋನಾರ್ ಹಾಗೂ ಸುಧಾರಿತ ನಿಗಾ ವ್ಯವಸ್ಥೆಗಳನ್ನು ಅಳವಡಿಸಲಾಗಿದೆ. ಆಳವಾದ ಸಮುದ್ರದಿಂದ ಹಿಡಿದು ಕಡಿಮೆ ಆಳದ ಕರಾವಳಿ ನೀರಿನಲ್ಲಿಯೂ ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸುವ ಸಾಮರ್ಥ್ಯ ಇದಕ್ಕಿದೆ. ಈ ನೌಕೆಯಲ್ಲಿ ಬಳಸಿರುವ ಉಪಕರಣಗಳು ಮತ್ತು ವ್ಯವಸ್ಥೆಗಳ ಪೈಕಿ 80 ಪ್ರತಿಶತಕ್ಕೂ ಹೆಚ್ಚು ಸ್ವದೇಶಿ ತಂತ್ರಜ್ಞಾನ ಅಳವಡಿಸಲಾಗಿದ್ದು, ದೇಶೀಯ ರಕ್ಷಣಾ ಕೈಗಾರಿಕೆ ಹಾಗೂ ಎಂಎಸ್‌ಎಂಇ ಸಂಸ್ಥೆಗಳ ಸಾಮರ್ಥ್ಯವನ್ನು ಪ್ರತಿಬಿಂಬಿಸುತ್ತದೆ.

ಶಿವಾಜಿ ಮಹಾರಾಜರ ಸಮುದ್ರ ಪರಂಪರೆಗೆ ಗೌರವದ ಹೆಮ್ಮೆಗಾಗಿ ಈ ಯುದ್ಧನೌಕೆಗೆ ಮಹಾರಾಷ್ಟ್ರದ ಐತಿಹಾಸಿಕ ಕರಾವಳಿ ಪಟ್ಟಣ ಮಾಲ್ವಣ್ ಹೆಸರಿಡಲಾಗಿದೆ. ಛತ್ರಪತಿ ಶಿವಾಜಿ ಮಹಾರಾಜರು ಪಶ್ಚಿಮ ಕರಾವಳಿಯ ಭದ್ರತೆಗಾಗಿ ನಿರ್ಮಿಸಿದ ಐತಿಹಾಸಿಕ ಸಿಂಧುದುರ್ಗ ಕೋಟೆ ಮಾಲ್ವಣ್‌ನಲ್ಲೇ ಇದೆ. ಶಿವಾಜಿ ಮಹಾರಾಜರು ಇಂಗ್ಲಿಷ್, ಡಚ್, ಫ್ರೆಂಚ್, ಪೋರ್ಚುಗೀಸ್ ಹಾಗೂ ಜಂಜೀರಾದ ಸಿದ್ದಿಗಳ ದಾಳಿಗಳನ್ನು ತಡೆಯಲು ಮತ್ತು ಮರಾಠಾ ನೌಕಾಪಡೆಯನ್ನು ಬಲಪಡಿಸಲು ಮಾಲ್ವಣ್ ಪ್ರದೇಶವನ್ನು ಪ್ರಮುಖ ನೌಕಾ ನೆಲೆಯಾಗಿ ಅಭಿವೃದ್ಧಿಪಡಿಸಿದ್ದರು. ಈ ಐತಿಹಾಸಿಕ ಪರಂಪರೆಯ ಗೌರವಾರ್ಥ ಈ ನೂತನ ಯುದ್ಧನೌಕೆಗೆ ‘ಮಾಲ್ವಣ್’ ಎಂಬ ಹೆಸರು ನೀಡಲಾಗಿದೆ. 2003ರವರೆಗೆ ಭಾರತೀಯ ನೌಕಾಪಡೆಯಲ್ಲಿ ಸೇವೆ ಸಲ್ಲಿಸಿದ್ದ ಮೈನ್‌ಸ್ವೀಪರ್ ಐಎನ್‌ಎಸ್ ಮಾಲ್ವಣ್ ನ ಪರಂಪರೆಯನ್ನು ಮುಂದುವರಿಸುವ ಉದ್ದೇಶದಿಂದಲೇ ಈ ನೂತನ ಯುದ್ಧನೌಕೆಗೆ ಅದೇ ಹೆಸರನ್ನು ಮರುನಾಮಕರಣ ಮಾಡಲಾಗಿದೆ.


‘ಬಾಘ್ ನಖ್’ ಲಾಂಛನದ ವಿಶೇಷತೆ: INS ಮಾಲ್ವಣ್‌ನ ಲಾಂಛನದಲ್ಲಿ ಛತ್ರಪತಿ ಶಿವಾಜಿ ಮಹಾರಾಜರ ಐತಿಹಾಸಿಕ ಆಯುಧವಾದ ‘ಬಾಘ್ ನಖ್’ (ಹುಲಿಯ ಉಗುರು) ಪ್ರಮುಖ ಸ್ಥಾನ ಪಡೆದಿದೆ. 1659ರಲ್ಲಿ ಪ್ರತಾಪಗಢ ಕೋಟೆಯಲ್ಲಿ ಅಫ್ಜಲ್ ಖಾನ್ ನಡೆಸಿದ ದ್ರೋಹದ ಪ್ರಯತ್ನವನ್ನು ಶಿವಾಜಿ ಮಹಾರಾಜರು ಇದೇ ಬಾಘ್ ನಖ್ ಬಳಸಿ ವಿಫಲಗೊಳಿಸಿದ ಐತಿಹಾಸಿಕ ಘಟನೆಯನ್ನು ಇದು ಸ್ಮರಿಸುತ್ತದೆ. ಈ ಲಾಂಛನವು ಧೈರ್ಯ, ಚುರುಕುತನ, ನಿರ್ಭಯತೆ ಮತ್ತು ಶತ್ರುಗಳ ವಿರುದ್ಧ ನಿಖರ ಪ್ರತಿಕ್ರಿಯೆಯ ಸಂಕೇತವಾಗಿದೆ. ಲಾಂಛನದ ಸುತ್ತಲಿರುವ ಸಮುದ್ರದ ಅಲೆಗಳು ಭಾರತೀಯ ನೌಕಾಪಡೆಯ ನಿರಂತರ ಜಾಗರೂಕತೆ ಹಾಗೂ ದೇಶದ ಕಡಲ ಗಡಿಗಳನ್ನು ರಕ್ಷಿಸುವ ಅಚಲ ಬದ್ಧತೆಯನ್ನು ಪ್ರತಿನಿಧಿಸುತ್ತವೆ.

ರಕ್ಷಣಾ ಸಾಮರ್ಥ್ಯಕ್ಕೆ ಮತ್ತೊಂದು ಮೈಲಿಗಲ್ಲು: INS ಮಾಲ್ವಣ್ ಸೇರ್ಪಡೆಯೊಂದಿಗೆ ಭಾರತೀಯ ನೌಕಾಪಡೆಯ ಕರಾವಳಿ ರಕ್ಷಣಾ ಸಾಮರ್ಥ್ಯ ಮತ್ತಷ್ಟು ಬಲಗೊಳ್ಳಲಿದ್ದು, ವಿಶೇಷವಾಗಿ ಜಲಾಂತರ್ಗಾಮಿ ನೌಕೆಗಳ ವಿರುದ್ಧದ ಕಾರ್ಯಾಚರಣೆಗಳಲ್ಲಿ ದೇಶದ ಶಕ್ತಿ ಇನ್ನಷ್ಟು ವೃದ್ಧಿಯಾಗಲಿದೆ. ಸ್ವದೇಶಿ ರಕ್ಷಣಾ ಉತ್ಪಾದನಾ ಕ್ಷೇತ್ರದ ಯಶಸ್ಸಿಗೆ ಈ ಯುದ್ಧನೌಕೆ ಮತ್ತೊಂದು ಮಹತ್ವದ ಮೈಲಿಗಲ್ಲು ಎಂದು ಪರಿಗಣಿಸಲಾಗಿದೆ.