Dandeli|ದಾಂಡೇಲಿಯ ಸ್ಟರ್ಲಿಂಗ್ ರಿವರ್ ರೆಸಾರ್ಟ್ (Sterling River Resort) ಖಾಸಗಿ ರೆಸಾರ್ಟ್‌ನಲ್ಲಿ ಜಿಪ್‌ಲೈನ್ (Zip line) ಸಾಹಸ ಕ್ರೀಡೆ ವೇಳೆ ಲೈನ್ ತುಂಡಾಗಿ ವಿಜಯಪುರ ಮೂಲದ ಯುವಕನೊಬ್ಬ ಸುಮಾರು 30–40 ಅಡಿ ಎತ್ತರದಿಂದ ಕೆಳಗೆ ಬಿದ್ದು ಗಂಭೀರವಾಗಿ ಗಾಯಗೊಂಡಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

ಗಾಯಗೊಂಡಿರುವವರು ವಿಜಯಪುರ ಜಿಲ್ಲೆಯ ಕುಬೇರ್ ಸುರಪುರ ಎಂದು ಗುರುತಿಸಲಾಗಿದೆ. ಜುಲೈ 3ರಂದು ತಮ್ಮ ಸಹೋದರ ಪ್ರಶಾಂತ ಅವರೊಂದಿಗೆ ದಾಂಡೇಲಿಯ ಸ್ಟರ್ಲಿಂಗ್ ರಿವರ್ ರೆಸಾರ್ಟ್‌ ಗೆ ಪ್ರವಾಸಕ್ಕೆ ತೆರಳಿದ್ದ ವೇಳೆ ಈ ದುರ್ಘಟನೆ ಸಂಭವಿಸಿದೆ.

ಕುಟುಂಬದವರ ಮಾಹಿತಿ ಪ್ರಕಾರ, ಜಿಪ್‌ಲೈನ್‌ನಲ್ಲಿ ಸಾಗುತ್ತಿದ್ದ ವೇಳೆ ಸುರಕ್ಷತಾ ಲಾಕ್ (ಲಾಕ್ ಕಟ್) ಏಕಾಏಕಿ ತುಂಡಾಗಿ ಕುಬೇರ್ ಸುಮಾರು 30 ರಿಂದ 40 ಅಡಿ ಎತ್ತರದಿಂದ ನೆಲಕ್ಕೆ ಬಿದ್ದಿದ್ದಾರೆ. ಈ ಭೀಕರ ಅಪಘಾತದ ದೃಶ್ಯವನ್ನು ಸಹೋದರ ಪ್ರಶಾಂತ ತಮ್ಮ ಮೊಬೈಲ್‌ನಲ್ಲಿ ಸೆರೆಹಿಡಿದಿದ್ದಾರೆ ಎನ್ನಲಾಗಿದೆ.

ಅಪಘಾತದಲ್ಲಿ ಕುಬೇರ್ ಅವರ ಎರಡೂ ಕೈ ಹಾಗೂ ಎರಡೂ ಕಾಲಿನ ಎಲುಬುಗಳು ಮುರಿದಿದ್ದು, ನರಗಳಿಗೂ ಗಂಭೀರ ಹಾನಿಯಾಗಿದೆ. ಮೊದಲಿಗೆ ದಾಂಡೇಲಿಯ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಪ್ರಾಥಮಿಕ ಚಿಕಿತ್ಸೆ ನೀಡಲಾಗಿತ್ತು. ನಂತರ ವಿಜಯಪುರದ ಖಾಸಗಿ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದ್ದು, ಬಳಿಕ ಹೆಚ್ಚಿನ ಚಿಕಿತ್ಸೆಗೆ ಮಹಾರಾಷ್ಟ್ರದ ಮೀರಜ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಈಗಾಗಲೇ ಒಂದು ಶಸ್ತ್ರಚಿಕಿತ್ಸೆ ನಡೆದಿದ್ದು, ಕೈ ಮತ್ತು ಕಾಲುಗಳಿಗೆ ಇನ್ನಷ್ಟು ಶಸ್ತ್ರಚಿಕಿತ್ಸೆ ಅಗತ್ಯವಿದೆ ಎಂದು ವೈದ್ಯರು ತಿಳಿಸಿದ್ದಾರೆ.

ಘಟನೆಗೆ ರೆಸಾರ್ಟ್ ಸಿಬ್ಬಂದಿಯ ನಿರ್ಲಕ್ಷ್ಯ ಮತ್ತು ಸಮರ್ಪಕ ಸುರಕ್ಷತಾ ಕ್ರಮಗಳ ಕೊರತೆಯೇ ಕಾರಣ ಎಂದು ಕುಬೇರ್ ಅವರ ಕುಟುಂಬ ಆರೋಪಿಸಿದೆ. ಅಪಘಾತದ ಬಳಿಕ ಚಿಕಿತ್ಸೆಯ ಸಂಪೂರ್ಣ ವೆಚ್ಚವನ್ನು ಭರಿಸುವುದಾಗಿ ರೆಸಾರ್ಟ್ ನಿರ್ವಹಣೆ ಭರವಸೆ ನೀಡಿದ್ದರೂ, ನಂತರ ಚಿಕಿತ್ಸಾ ವೆಚ್ಚಕ್ಕೆ ಸ್ಪಂದಿಸಿಲ್ಲ ಎಂದು ಕುಟುಂಬದವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಇದಕ್ಕೆ ಪ್ರತಿಕ್ರಿಯಿಸಿರುವ ಸ್ಟರ್ಲಿಂಗ್ ರಿವರ್ ರೆಸಾರ್ಟ್ ಮ್ಯಾನೇಜರ್, ಅಪಘಾತ ಸಂಭವಿಸಿರುವುದನ್ನು ಒಪ್ಪಿಕೊಂಡಿದ್ದು, ಇದು ಸಿಬ್ಬಂದಿಯ ನಿರ್ಲಕ್ಷ್ಯದಿಂದ ನಡೆದಿಲ್ಲ, ಆಕಸ್ಮಿಕ ಘಟನೆ ಎಂದು ತಿಳಿಸಿದ್ದಾರೆ. ಶೀಘ್ರದಲ್ಲೇ ವಿಜಯಪುರಕ್ಕೆ ತೆರಳಿ ಗಾಯಾಳುವಿನ ಕುಟುಂಬದವರ ಜತೆ ಮಾತುಕತೆ ನಡೆಸುವುದಾಗಿ ಅವರು ಹೇಳಿದ್ದಾರೆ.

ಸಂತೋಷದ ಕ್ಷಣಗಳನ್ನು ಕಳೆಯಲು ತೆರಳಿದ್ದ ಪ್ರವಾಸ ದುರಂತವಾಗಿ ಪರಿಣಮಿಸಿದ್ದು, ವಿಜಯಪುರದ ಯುವಕ ಇದೀಗ ಆಸ್ಪತ್ರೆಯ ಹಾಸಿಗೆಯಲ್ಲೇ ಚಿಕಿತ್ಸೆ ಪಡೆಯುತ್ತಿರುವುದು ಕುಟುಂಬದವರ ನೋವನ್ನು ಮತ್ತಷ್ಟು ಹೆಚ್ಚಿಸಿದೆ.