ಪಣಜಿ: ಗೋವಾದ ಸಂವೋರ್ಡೆಂ (Sanvordem) ವಿಧಾನಸಭಾ ಕ್ಷೇತ್ರದ ಸಾರ್ವಜನಿಕ ಗಣೇಶೋತ್ಸವ ಮಂಡಳಿ ಈ ವರ್ಷದ ಗಣೇಶೋತ್ಸವದ ಅಂಗವಾಗಿ ದೇಣಿಗೆ ಕೂಪನ್ ಅಭಿಯಾನವನ್ನು ಮತ್ತಷ್ಟು ಆಕರ್ಷಕವಾಗಿಸಿದ್ದು, ಮೊದಲ ಬಹುಮಾನವಾಗಿ ಬಿಎಂಡಬ್ಲ್ಯು (BMW) ಕಾರು ಘೋಷಿಸಿದೆ.

ಮಂಡಳಿಯ ವಾರ್ಷಿಕ ದೇಣಿಗೆ ಕೂಪನ್ ಯೋಜನೆಗೆ ಕಳೆದ ಎರಡು ವರ್ಷಗಳಿಂದ ಜನರಿಂದ ಅಪಾರ ಸ್ಪಂದನೆ ವ್ಯಕ್ತವಾಗುತ್ತಿದೆ. 2024ರಲ್ಲಿ ಮೊದಲ ಬಾರಿಗೆ ಐದು ಕಾರುಗಳು ಮತ್ತು ಐದು ದ್ವಿಚಕ್ರ ವಾಹನಗಳನ್ನು ಬಹುಮಾನವಾಗಿ ಘೋಷಿಸಲಾಗಿತ್ತು. ಬಳಿಕ 2025ರಲ್ಲಿ ಬಹುಮಾನಗಳ ಸಂಖ್ಯೆಯನ್ನು ದ್ವಿಗುಣಗೊಳಿಸಿ, ಮೊದಲ ಬಹುಮಾನವಾಗಿ ಆಡಿ (Audi) ಕಾರು ನೀಡಲಾಗಿತ್ತು. ಆಗ ಮುದ್ರಿಸಿದ್ದ 90 ಸಾವಿರ ಕೂಪನ್‌ಗಳು ಕೇವಲ 21 ದಿನಗಳಲ್ಲಿ ಸಂಪೂರ್ಣ ಮಾರಾಟವಾಗಿದ್ದವು.

ಈ ಬಾರಿ ಜನರ ಬೇಡಿಕೆಯನ್ನು ಗಮನದಲ್ಲಿಟ್ಟುಕೊಂಡು 1.20 ಲಕ್ಷ ದೇಣಿಗೆ ಕೂಪನ್‌ಗಳನ್ನು ಮುದ್ರಿಸಲಾಗಿದೆ. ಪ್ರತಿಯೊಂದು ಪುಸ್ತಕದಲ್ಲಿ 10 ಕೂಪನ್‌ಗಳಿದ್ದು, ಪ್ರತಿ ಕೂಪನ್‌ನ ದೇಣಿಗೆ ಮೊತ್ತ ₹400 ನಿಗದಿಪಡಿಸಲಾಗಿದೆ. ಈ ವರ್ಷದ ಬಹುಮಾನಗಳಲ್ಲಿ 15 ನಾಲ್ಕು ಚಕ್ರದ ವಾಹನಗಳು, 15 ದ್ವಿಚಕ್ರ ವಾಹನಗಳು ಹಾಗೂ 15 ನಗದು ಬಹುಮಾನಗಳು ಸೇರಿವೆ. ಮೊದಲ ಬಹುಮಾನವಾಗಿ BMW ಕಾರು, ನಂತರ Audi, Toyota Innova ಸೇರಿದಂತೆ ವಿವಿಧ ಕಂಪನಿಗಳ ನೂತನ ಮಾದರಿಯ ಕಾರುಗಳನ್ನು ನೀಡಲಾಗುತ್ತಿದೆ. ನಾಲ್ಕು ಚಕ್ರದ ವಾಹನಗಳಲ್ಲಿ ಎರಡು ಎಲೆಕ್ಟ್ರಿಕ್ ಕಾರುಗಳು ಹಾಗೂ ದ್ವಿಚಕ್ರ ವಾಹನಗಳಲ್ಲಿ ಐದು ಎಲೆಕ್ಟ್ರಿಕ್ ವಾಹನಗಳು ಸೇರಿವೆ.

ಇದರ ಜೊತೆಗೆ, ದೇಣಿಗೆ ಕೂಪನ್ ಪುಸ್ತಕ ಸಂಖ್ಯೆಗಳ ಆಧಾರದ ಮೇಲೆ ತಲಾ ₹10 ಸಾವಿರ ಮೌಲ್ಯದ 15 ನಗದು ಬಹುಮಾನಗಳನ್ನೂ ಘೋಷಿಸಲಾಗಿದೆ. ದೇಣಿಗೆ ಕೂಪನ್‌ಗಳನ್ನು ಸುಲಭವಾಗಿ ಪಡೆಯಲು ಪಣಜಿ, ಮಡಗಾಂವ್ ಹಾಗೂ ಸಂವೋರ್ಡೆಂನ ಟಿಸ್ಕ್ ಪ್ರದೇಶಗಳಲ್ಲಿ ವಿಶೇಷ ಕೌಂಟರ್‌ಗಳನ್ನು ಸಹ ತೆರೆಯಲಾಗಿದೆ.

ಈ ವಿಶಿಷ್ಟ ದೇಣಿಗೆ ಕೂಪನ್ ಯೋಜನೆ ಗೋವಾದಲ್ಲಿ ಗಣೇಶೋತ್ಸವದ ಸಂಭ್ರಮಕ್ಕೆ ಹೊಸ ಮೆರುಗು ತಂದಿದ್ದು, ಭಕ್ತರು ಮತ್ತು ಸಾರ್ವಜನಿಕರಿಂದ ಉತ್ತಮ ಸ್ಪಂದನೆ ವ್ಯಕ್ತವಾಗುತ್ತಿದೆ.