ಕಾರವಾರ: ಅಂಕೋಲಾ ತಾಲೂಕಿನ ಬೇಲೇಕೇರಿ ಮೀನುಗಾರಿಕಾ ಬಂದರಿನಲ್ಲಿ ಅಲೆಗಳ ರಭಸ ಹಾಗೂ ನದಿಯ ನೀರಿನ ಏಕಾಏಕಿ ಉಬ್ಬರದಿಂದ ಮೂರು ಮೀನುಗಾರಿಕಾ ದೋಣಿಗಳು ಮುಳುಗಡೆಯಾದ ಘಟನೆ ನಡೆದಿದೆ.

ಬೇಲೇಕೇರಿ ಮೀನುಗಾರಿಕಾ ಬಂದರಿನ ನದಿ ಮತ್ತು ಸಮುದ್ರ ಸಂಗಮ ಪ್ರದೇಶದಲ್ಲಿ ಈ ಅವಘಡ ಸಂಭವಿಸಿದೆ. ನದಿಯ ನೀರಿನ ಮಟ್ಟ ಏಕಾಏಕಿ ಹೆಚ್ಚಾಗಿ ಹರಿವು ತೀವ್ರಗೊಂಡ ಪರಿಣಾಮ ದೋಣಿಗಳು ಕೊಚ್ಚಿಹೋಗಿ ಮುಳುಗಿವೆ ಎಂದು ತಿಳಿದುಬಂದಿದೆ.

ಶ್ರೀಪಾದ್ ಬಾನಾವಳಿಕರ್, ರಾಮಚಂದ್ರ ಕುಡ್ತಳಕರ್ ಹಾಗೂ ನೀಲೇಶ್ ಜಾಂಬಳೇಕರ್ ಅವರಿಗೆ ಸೇರಿದ ಮೀನುಗಾರಿಕಾ ದೋಣಿಗಳು ಹಾನಿಗೊಳಗಾಗಿವೆ. ದೋಣಿಗಳಲ್ಲಿದ್ದ ಮೀನುಗಾರಿಕಾ ಬಲೆಗಳು, ಎಂಜಿನ್‌ಗಳು ಹಾಗೂ ಇತರೆ ಮೀನುಗಾರಿಕಾ ಉಪಕರಣಗಳೂ ನೀರಿನಲ್ಲಿ ಮುಳುಗಿ ಹಾನಿಗೊಳಗಾಗಿವೆ.

ಈ ಘಟನೆಯಿಂದ ಸಂಬಂಧಿಸಿದ ಮೀನುಗಾರರಿಗೆ ಲಕ್ಷಾಂತರ ರೂಪಾಯಿ ನಷ್ಟ ಉಂಟಾಗಿದ್ದು, ಸರ್ಕಾರ ಸೂಕ್ತ ಪರಿಹಾರ ನೀಡಬೇಕು ಎಂದು ಸ್ಥಳೀಯ ಮೀನುಗಾರರು ಆಗ್ರಹಿಸಿದ್ದಾರೆ. ಘಟನೆ ಕುರಿತು ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.