ಬನವಾಸಿ| ನಿರಂತರ ಮಳೆಯ ಪರಿಣಾಮ ಹಾಗೂ ವರದಾ ನದಿಯ ಮೂಲ ಪ್ರದೇಶಗಳಾದ ಸಾಗರ, ಸೊರಬ ಮತ್ತು ಶಿವಮೊಗ್ಗ ಜಿಲ್ಲೆಯ ವಿವಿಧ ಭಾಗಗಳಲ್ಲಿ ಭಾರೀ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಬನವಾಸಿ ಭಾಗದಲ್ಲಿ ವರದಾ ನದಿಯ ಒಳಹರಿವು ಹೆಚ್ಚಳವಾಗಿದೆ.

ಈ ಹಿನ್ನೆಲೆಯಲ್ಲಿ ಶಿರಸಿ ಉಪವಿಭಾಗದ ಸಹಾಯಕ ಆಯುಕ್ತ ಚಂದ್ರಶೇಖರ್ ಅವರು ತಹಶೀಲ್ದಾರ್ ಪಟ್ಟರಾಜ ಗೌಡ ಹಾಗೂ ಕಂದಾಯ ಇಲಾಖೆ ಸಿಬ್ಬಂದಿಯೊಂದಿಗೆ ವರದಾ ನದಿ ತೀರ ಮತ್ತು ಪ್ರವಾಹ ಪೀಡಿತ ಪ್ರದೇಶಗಳಾದ ಮೊಗವಳ್ಳಿ ಹಾಗೂ ಭಾಷಿ ಗ್ರಾಮಗಳಿಗೆ ಭೇಟಿ ನೀಡಿ ಪರಿಸ್ಥಿತಿಯನ್ನು ಪರಿಶೀಲಿಸಿದರು.

ಪರಿಶೀಲನೆ ವೇಳೆ ಪ್ರವಾಹ ಪರಿಸ್ಥಿತಿ ಎದುರಾದರೆ ಕೈಗೊಳ್ಳಬೇಕಾದ ಮುನ್ನೆಚ್ಚರಿಕಾ ಕ್ರಮಗಳ ಕುರಿತು ಅಧಿಕಾರಿಗಳೊಂದಿಗೆ ಚರ್ಚೆ ನಡೆಸಲಾಯಿತು. ಜೊತೆಗೆ ನುರಿತ ಈಜುಗಾರರ ಅಗತ್ಯವಿದ್ದು, ಗ್ರಾಮದಲ್ಲಿರುವ ಈಜುಪಟುಗಳನ್ನು ಸಂಘಟಿಸಿ ಅಗತ್ಯ ಬಿದ್ದರೆ ಅವರ ಸಹಕಾರ ಪಡೆಯಲಾಗುವುದು ಎಂದು ಸಹಾಯಕ ಆಯುಕ್ತರು ತಿಳಿಸಿದರು.

ಈ ಸಂದರ್ಭದಲ್ಲಿ ಬನವಾಸಿ ಉಪ ತಹಶೀಲ್ದಾರ್ ಮಂಜುಳಾ ನಾಯಕ, ಕಂದಾಯ ನಿರೀಕ್ಷಕಿ ಆಶಾ ಭಟ್, ಪಿಡಿಒ ಆಶಾ ಗೌಡ, ಸಿಡಿಪಿಒ ನಂದಕುಮಾರ್ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.

ವರದಾ ನದಿ ಪ್ರವಾಹ ಸೃಷ್ಟಿಸುವ ಹಂತಕ್ಕೆ ಬಂದರೆ ಅದನ್ನು ಎದುರಿಸಲು ಕಂದಾಯ ಇಲಾಖೆ ಸಂಪೂರ್ಣ ಸಿದ್ಧವಾಗಿದೆ. ಅಗತ್ಯವಿದ್ದಲ್ಲಿ ಮೊಗವಳ್ಳಿ ಪ್ರಾಥಮಿಕ ಶಾಲೆಯಲ್ಲಿ ಗಂಜಿ ಕೇಂದ್ರ ತೆರೆಯಲು ಸಿದ್ಧತೆ ಮಾಡಿಕೊಂಡಿದ್ದೇವೆ.
– ಚಂದ್ರಶೇಖರ್, ಸಹಾಯಕ ಆಯುಕ್ತರು, ಶಿರಸಿ

ನದಿಯಲ್ಲಿ ನೀರಿನ ಮಟ್ಟ ಏರಿಕೆಯಾಗುತ್ತಿರುವುದರಿಂದ ಗ್ರಾಮಸ್ಥರು ಎಚ್ಚರಿಕೆಯಿಂದ ಇರಬೇಕು. ನೆರೆ ಬರುವ ಮುನ್ಸೂಚನೆ ಕಂಡುಬಂದರೆ ಗ್ರಾಮಸ್ಥರು ಮುತುವರ್ಜಿ ವಹಿಸಬೇಕು. ದನಕರುಗಳು, ವಯೋವೃದ್ಧರು ಹಾಗೂ ಮಕ್ಕಳ ಸುರಕ್ಷತೆಗೆ ಆದ್ಯತೆ ನೀಡಬೇಕು.
-ಪಟ್ಟರಾಜ ಗೌಡ, ತಹಶೀಲ್ದಾರ್, ಶಿರಸಿ