ನವದೆಹಲಿ: ಅಯೋಧ್ಯೆಯ ರಾಮ ಮಂದಿರ ದೇಣಿಗೆ ಅವ್ಯವಹಾರ ಪ್ರಕರಣ ಸಂಬಂಧ ಫೈಜಾಬಾದ್ ಬಾರ್ ಅಸೋಸಿಯೇಷನ್‌ ಟ್ರಸ್ಟ್‌ನ ಕೆಲವು ಸದಸ್ಯರ ವಿರುದ್ಧ ಕಠಿಣ ನಿಲುವು ಕೈಗೊಂಡಿದೆ. ಸೋಮವಾರ ನಡೆದ ಸಾಮಾನ್ಯ ಸಭೆಯಲ್ಲಿ, ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ಗೆ ಸಂಬಂಧಿಸಿದ ಮಾಜಿ ಪ್ರಧಾನ ಕಾರ್ಯದರ್ಶಿ ಚಂಪತ್ ರೈ, ಟ್ರಸ್ಟಿ ಅನಿಲ್ ಮಿಶ್ರಾ ಹಾಗೂ ಗೋಪಾಲ್ ರಾವ್ ಅವರು ಮೂರು ದಿನಗಳೊಳಗೆ ಅಯೋಧ್ಯೆ ತೊರೆಯಬೇಕು ಎಂದು ಒತ್ತಾಯಿಸಿ ಗಡುವು ನೀಡಿದೆ.

ಮೂರು ದಿನಗಳೊಳಗೆ ಅವರು ನಗರ ತೊರೆಯದಿದ್ದರೆ ಅಯೋಧ್ಯೆ ಬಂದ್ ಮಾಡುವುದಾಗಿ ವಕೀಲರು ಎಚ್ಚರಿಕೆ ನೀಡಿದ್ದಾರೆ. ನಗರದ ಎಲ್ಲಾ ಪ್ರವೇಶ ಮಾರ್ಗಗಳನ್ನು ಬಂದ್ ಮಾಡಿ ತೀವ್ರ ಪ್ರತಿಭಟನೆ ನಡೆಸುವುದಾಗಿ ಬಾರ್ ಅಸೋಸಿಯೇಷನ್‌ ಅಸಮಾಧಾನ ವ್ಯಕ್ತಪಡಿಸಿದೆ‌.

ಈ ಪ್ರಕರಣದಲ್ಲಿ ಆರೋಪಿಗಳ ಪರ ಯಾವುದೇ ವಕೀಲರು ವಾದ ಮಂಡಿಸದಂತೆ ಬಾರ್ ಅಸೋಸಿಯೇಷನ್‌ ತನ್ನ ಸದಸ್ಯರಿಗೆ ಸೂಚನೆ ನೀಡಿದೆ. ನಿರ್ಣಯ ಉಲ್ಲಂಘಿಸಿ ಆರೋಪಿಗಳ ಪರ ವಕಾಲತ್ತು ವಹಿಸುವ ವಕೀಲರಿಗೆ 5 ಲಕ್ಷ ರೂ. ದಂಡ ಹಾಗೂ ಸಂಘದಿಂದ ಶಾಶ್ವತವಾಗಿ ಹೊರಹಾಕುವ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದೆ.

ಇನ್ನು ರಾಮ ಮಂದಿರದ ದೇಣಿಗೆ ಪ್ರಕರಣ ಸಂಬಂಧಿಸಿ ಬ್ಯಾಂಕ್ ಖಾತೆಗಳ ಪರಿಶೀಲನೆ ಹಾಗೂ ತನಿಖೆಯನ್ನು ಪೊಲೀಸರು ಮತ್ತಷ್ಟು ಚುರುಕುಗೊಳಿಸಿದ್ದಾರೆ. ಎಸ್‌ಬಿಐ, ಬ್ಯಾಂಕ್ ಆಫ್ ಬರೋಡಾ ಹಾಗೂ ಕೆನರಾ ಬ್ಯಾಂಕ್‌ಗಳ ಸ್ಥಳೀಯ ಶಾಖೆಗಳಿಗೆ ಮೂರು ಪೊಲೀಸ್ ತಂಡಗಳು ಭೇಟಿ ನೀಡಿ ಆರೋಪಿಗಳಿಗೆ ಸಂಬಂಧಿಸಿದ ಖಾತೆಗಳು, ಲಾಕರ್‌ಗಳು ಹಾಗೂ ಹಣಕಾಸು ವ್ಯವಹಾರಗಳ ದಾಖಲೆಗಳನ್ನು ಪರಿಶೀಲನೆ ನಡೆಸಿದ್ದಾರೆ. ಈ ಸಂಬಂಧ ಬ್ಯಾಂಕ್ ವ್ಯವಸ್ಥಾಪಕರಿಂದಲೂ ಮಾಹಿತಿ ಸಂಗ್ರಹಿಸಲಾಗುತ್ತಿದ್ದು, ಹಣಕಾಸು ವ್ಯವಹಾರಗಳ ಕುರಿತು ತನಿಖೆ ಮುಂದುವರಿದಿದೆ.

ಪ್ರಕರಣ ಸಂಬಂಧಿಸಿ ಟ್ರಸ್ಟ್ ವಿರುದ್ಧ ಹೆಚ್ಚಿದ ಒತ್ತಡ ಹಿನ್ನೆಲೆ ನ್ಯಾಯಸಮ್ಮತ ತನಿಖೆಗೆ ಅವಕಾಶ ಕಲ್ಪಿಸುವ ಉದ್ದೇಶದಿಂದ ಚಂಪತ್ ರೈ ಹಾಗೂ ಅನಿಲ್ ಮಿಶ್ರಾ ಅವರು ತಮ್ಮ ಸ್ಥಾನಗಳಿಗೆ ರಾಜೀನಾಮೆ ನೀಡಿರುವುದಾಗಿ ವರದಿಯಾಗಿದೆ.

ಭಕ್ತರಿಂದ ಬಂದ ನಗದು, ಚಿನ್ನ ಮತ್ತು ಬೆಳ್ಳಿ ಕಾಣಿಕೆಗಳ ದುರುಪಯೋಗದ ಆರೋಪಗಳ ಹಿನ್ನೆಲೆಯಲ್ಲಿ ಈ ವಿವಾದ ಉಂಟಾಗಿದೆ. ರಾಜ್ಯ ಸರ್ಕಾರ ಈಗಾಗಲೇ ವಿಶೇಷ ತನಿಖಾ ತಂಡ (SIT) ರಚಿಸಿದ್ದು, ಕೆಲವರ ಬಂಧಿಸಿ ವಿಚಾರಣೆ ಮುಂದುವರಿಸಿದೆ. ಈ ಪ್ರಕರಣಕ್ಕೆ ಸಂಬಂಧಿಸಿ ವಿವಿಧ ಅರ್ಜಿಗಳು ಸುಪ್ರೀಂ ಕೋರ್ಟ್ ಮತ್ತು ಅಲಹಾಬಾದ್ ಹೈಕೋರ್ಟ್‌ಗಳಲ್ಲಿ ವಿಚಾರಣೆಯಲ್ಲಿದ್ದು, ನ್ಯಾಯಾಲಯದ ಮೇಲ್ವಿಚಾರಣೆಯ ತನಿಖೆ ಹಾಗೂ ಸಿಎಜಿ (CAG) ಮೂಲಕ ಫೊರೆನ್ಸಿಕ್ ಆಡಿಟ್ ನಡೆಸುವಂತೆ ಆಗ್ರಹವೂ ಕೇಳಿಬಂದಿದೆ.

ಯಾರು ಗೋಪಾಲರಾವ್: ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ಮೂಲದವರಾದ ಗೋಪಾಲ್ ರಾವ್  (ಗೋಪಾಲ ನಾಗರಕಟ್ಡೆ)  ಅವರು, ಅಯೋಧ್ಯೆ ರಾಮ ಮಂದಿರದ ನಿರ್ಮಾಣ ಹಾಗೂ ನಿರ್ವಹಣೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಭೌತಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಇವರು, ಆರ್.ಎಸ್.ಎಸ್. (RSS) ಮತ್ತು ವಿಶ್ವ ಹಿಂದೂ ಪರಿಷತ್‌ನ (VHP) ಮೂಲಕ ಸಮಾಜ ಸೇವೆ ಸಲ್ಲಿಸುತ್ತಿದ್ದಾರೆ.

ಅಯೋಧ್ಯೆ ರಾಮ ಮಂದಿರ ನಿರ್ಮಾಣದ ಬಳಿಕ ಇವರು ಮಂದಿರದ ವ್ಯವಸ್ಥಾಪಕರಾಗಿ (Administrator) ಮತ್ತು ವಿಶೇಷ ಆಹ್ವಾನಿತ ಸದಸ್ಯರಾಗಿ ಮಂದಿರದ ದೈನಂದಿನ ಹಾಗೂ ಆಡಳಿತಾತ್ಮಕ ಜವಾಬ್ದಾರಿಗಳನ್ನು ನೋಡಿಕೊಳ್ಳುತ್ತಿದ್ದಾರೆ.