ಉಡುಪಿ: ನಗರದ ಹೃದಯಭಾಗದಲ್ಲಿರುವ ಉಡುಪಿ ಜಿಲ್ಲಾ ನ್ಯಾಯಾಲಯಕ್ಕೆ ಇ-ಮೇಲ್ ಮೂಲಕ ಮತ್ತೆ ಹುಸಿ ಬಾಂಬ್ ಬೆದರಿಕೆಯ ಸಂದೇಶ ಬಂದಿದ್ದು, ಶ್ವಾನದಳ ಹಾಗು ಬಾಂಬ್ ತಪಾಸಣಾ ದಳ ಸ್ಥಳಕ್ಕೆ ತೆರಳಿ ವಿವಿಧೆಡೆ ತಪಾಸಣೆ ನಡೆಸಿದೆ.

ಜಿಲ್ಲಾ ನ್ಯಾಯಾಲಯದ ಇ-ಮೇಲ್ ಐಡಿಗೆ ಜೂ.26ರಂದು ರಾತ್ರಿ 8.53ಕ್ಕೆ 5 ಸಿಲಿಕಾನ್ ಡೈನಮೈಟ್ ಬಾಂಬ್‌ಗಳನ್ನು ಜಿಲ್ಲಾ ನ್ಯಾಯಾಲಯದ ರೆಕಾರ್ಡ್ ರೂಂ ಹಾಗೂ ಮೊದಲ ಮಹಡಿಯಲ್ಲಿರುವ ಇ – ಕೇಂದ್ರದಲ್ಲಿ ಇರಿಸಲಾಗಿದೆ ಎಂಬ
ಬಾಂಬ್ ಬೆದರಿಕೆ ಬಂದಿತ್ತು.

ಜೂ.27ರ ಮಧ್ಯಾಹ್ನ 11.30ಕ್ಕೆ ಕೋರ್ಟ್ ಸಿಬಂದಿ ಇ-ಮೇಲ್ ಗಮನಿಸಿದ್ದು, ತತ್‌ಕ್ಷಣ ಪೋಲಿಸ್ ಇಲಾಖೆಗೆ ಮಾಹಿತಿ ನೀಡಿದ್ದರು. ಪೊಲೀಸ್ ಇನ್ಸ್‌ಪೆಕ್ಟರ್ ಮಹೇಶ್ ಪ್ರಸಾದ್ ಜತೆ, ಪಿಎಸ್ಐಗಳಾದ ಭರತೇಶ್, ಈರಣ್ಣ, ರತ್ನಾಕರ್ ಹಾಗೂ ಸಿಬಂದಿ ಸ್ಥಳಕ್ಕೆ ತೆರಳಿ ಬಂದೋಬಸ್ತ್‌ ನಡೆಸಿದ್ದಲ್ಲದೇ, ಶ್ವಾನದಳ ಹಾಗೂ ಬಾಂಬ್ ತಪಾಸಣಾ ದಳ ನ್ಯಾಯಾಲಯದ ವಿವಿಧೆಡೆ ತಪಾಸಣೆ ನಡೆಸಿದೆ.

ಬಾಂಬ್ ಬೆದರಿಕೆಯ ಸಂದೇಶ ಬಂದಿದೆ ಎಂದು ತಿಳಿದಿದ್ದರೂ ವಕೀಲರು, ಕಕ್ಷಿದಾರರು ಶ್ವಾನದಳ ಹಾಗೂ ಬಾಂಬ್‌ ನಿಷ್ಕ್ರಿಯ ದಳದ ತಪಾಸಣೆಯನ್ನು ಕುತೂಹಲದಿಂದ ವೀಕ್ಷಿಸುತ್ತಿದ್ದರೇ ಹೊರತು ಯಾರೂ ಗಲಿಬಿಲಿಗೊಂಡಿರಲಿಲ್ಲ. ನ್ಯಾಯಾಧೀಶರು ತಮ್ಮ ಪೀಠದಿಂದ ಇಳಿಯದೇ ಕಲಾಪವನ್ನು ನಡೆಸುತ್ತಿದ್ದರು. ತಪಾಸಣೆಯ ವೇಳೆಯೂ ನ್ಯಾಯಾಧೀಶರು ಪೀಠದಲ್ಲೇ ಕುಳಿತು, ತಪಾಸಣೆಗೆ ಅನುವು ಮಾಡಿಕೊಟ್ಟಿದ್ದು, ತಪಾಸಣೆಯ ವೇಳೆ ವಕೀಲರು ಮತ್ತು ಕಕ್ಷಿದಾರರನ್ನು ಕಲಾಪದ ಹಾಲ್‌‌ನಿಂದ ಹೊರಗೆ ಕಳುಹಿಸಲಾಗಿತ್ತು. ನಂತರ ಎಂದಿನಂತೆ ನ್ಯಾಯಾಲಯದ ಕಲಾಪ ಮುಂದುವರಿದಿತ್ತು.

ಇ-ಮೇಲ್‌ನಲ್ಲಿ ಏನಿದೆ…?
ದುರ್ಗಾ ಸ್ಟಾಲಿನ್ ಅವರು ಧರ್ಮಗುರು ಮಹಮ್ಮದ್ ಅವರನ್ನು ನಿಂದಿಸಿದ್ದಾರೆ. ಹೀಗಾಗಿ 5 ಸಿಲಿಕಾನ್ ಡೈನಮೇಟ್ ಬಾಂಬ್‌ಗಳನ್ನು ಜಿಲ್ಲಾ ನ್ಯಾಯಾಲಯದ ರೆಕಾರ್ಡ್ ರೂಂ ಹಾಗೂ ಮೊದಲ ಮಹಡಿಯಲ್ಲಿರುವ ಇ – ಕೇಂದ್ರದಲ್ಲಿ ಇರಿಸಲಾಗಿದೆ.

ಇಂದು ಮುಸಲ್ಮಾನರಿಗೆ ಪವಿತ್ರ ಶುಕ್ರವಾರ. ದುರ್ಗಾ ಸ್ಟಾಲಿನ್ ಪ್ರಧಾನಿ ನರೇಂದ್ರ ಮೋದಿಯವರ ಸ್ಲೀಪರ್ ಸೆಲ್. ದ್ರಾವಿಡ ಕುಟುಂಬದ ಎಮ್‌.ಕೆ. ಸ್ಟಾಲಿನ್ ಹಾಗೂ ಉದಯನಿಧಿ ಅವರಿಗೆ ನಿಧಾನವಾಗಿ ವಿಷ ಪ್ರಾಶನ ಮಾಡುತ್ತಿದ್ದಾರೆ. ಹೀಗಾಗಿ ಎಮ್.ಕೆ. ಸ್ಟಾಲಿನ್ ಅವರ ತಲೆ ಕೂದಲು ಉದುರಿ, ವಿಗ್ ಇಡುತ್ತಿದ್ದಾರೆ. ಇದರಿಂದಾಗಿ ತಿರುಪರನ್‌ಕುಂದ್ರಂನಲ್ಲಿರುವ ದರ್ಗಾವನ್ನು ಡೆಮೋಲಿಶ್ ಮಾಡಲು ಸಹಕಾರಿಯಾಗುತ್ತದೆ. ಆಗ ದುರ್ಗಾ ಸ್ಟಾಲಿನ್ ಹಾಗೂ ಪ್ರೇಮಲತಾ ವಿಜಯಾಕಾಂತ್ ಮೋದಿಯವರ ಆಸೆಯನ್ನು ಈಡೇರಿಸಿದಂತಾಗುತ್ತದೆ. ಇದಕ್ಕೆ ನಾವು ಅವಕಾಶ ಮಾಡಿಕೊಡುವುದಿಲ್ಲ. ಅದಕ್ಕೆ ನಾವು ಈ ಮಾರ್ಗವನ್ನು ಹಿಡಿದಿದ್ದೇವೆ ಎಂದು ಬರೆಯಲಾಗಿದೆ.