Siddapur| ಷೇರು ಮಾರುಕಟ್ಟೆ ಹೂಡಿಕೆ ಮೂಲಕ ಹೆಚ್ಚಿನ ಲಾಭದ ಆಸೆ ತೋರಿಸಿ ವ್ಯಕ್ತಿಯೊಬ್ಬರಿಂದ ಸುಮಾರು ₹30 ಲಕ್ಷ ಹಣ ಪಡೆದು ವಂಚಿಸಿದ ಪ್ರಕರಣ ಸಿದ್ದಾಪುರ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.

ಸಿದ್ದಾಪುರ ತಾಲೂಕಿನ ಹರ್ತೆಬೈಲು ಬಳಿಯ ಬಾಲಚಂದ್ರ ಗಣಪತಿ ಹೆಗಡೆ (42) ಅವರೇ ವಂಚನೆಗೊಳಗಾದವರು. ಅವರು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಾಗಿದೆ. ದೂರಿನ ಪ್ರಕಾರ, ಸೆಬಿ ನೋಂದಾಯಿತ ಸ್ಟಾಕ್ ಅನಾಲಿಸ್ಟ್ ಹೆಸರಿನಲ್ಲಿ ಬಂದ ಟೆಲಿಗ್ರಾಂ ಗ್ರೂಪ್‌ನಲ್ಲಿದ್ದ X11 Elite Hub ಎಂಬ ಹೂಡಿಕೆ ಗ್ರೂಪ್ ಮೂಲಕ ಷೇರು ಹೂಡಿಕೆ ಮಾಹಿತಿ ನೀಡಲಾಗುತ್ತಿತ್ತು. ಷೇರಿನಲ್ಲಿ ಹೂಡಿಕೆಯ ಮೂಲಕ ಹಣ ಗಳಿಸುವ ಆಸೆ ಬಿದ್ದ ಹೆಗಡೆ, ಆ ಗ್ರೂಪ್‌ನ ಅಡ್ಮಿನ್, ಮೆಂಟರ್ ಹಾಗೂ ಅಸಿಸ್ಟೆಂಟ್‌ಗಳ ಮೂಲಕ ಟ್ರೇಡಿಂಗ್ ಖಾತೆ ತೆರೆದರು.

ಟ್ಯ್ರಾಪ್‌ ಆದ ಹೆಗಡೆ: ಖಾತೆ ತೆರದ ನಂತರ ಆರೋಪಿಗಳು ಹೂಡಿಕೆ ಮೊತ್ತ ಶೇ.100ಕ್ಕಿಂತ ಹೆಚ್ಚಾದ ಬಳಿಕ ಶೇ.20 ಕಮಿಷನ್ ನ್ನು ಮೂರನೇಯ ಪಾರ್ಟಿಯ ಖಾತೆಗೆ ಪಾವತಿಸಿ ನಂತರ ಉಳಿದ ಹಣವನ್ನು ವಿತ್‌ಡ್ರಾ ಮಾಡಿಕೊಳ್ಳಬಹುದು ಎಂದು ಇಬ್ಬರ ನಡುವೆ ಒಪ್ಪಂದ ಮಾಡಿಕೊಳ್ಳಲಾಗಿತ್ತು. ಅದರಂತೆ ಫೆಬ್ರವರಿ 18ರಿಂದ ಹಂತ ಹಂತವಾಗಿ ಒಟ್ಟು ₹30 ಲಕ್ಷ ಹಣವನ್ನು ಯುಪಿಐ ಮತ್ತು ಆರ್‌ಟಿಜಿಎಸ್ ಮೂಲಕ ಆರೋಪಿಗಳ ಖಾತೆಗಳಿಗೆ ಬಾಲಚಂದ್ರ ಹೆಗಡೆ ವರ್ಗಾವಣೆ ಮಾಡಿದ್ದಾರೆ. ನಂತರ ಹೂಡಿಕೆ ಮೊತ್ತ ಶೇ.300ರಷ್ಟು ಹೆಚ್ಚಾಗಿದ್ದರಿಂದ ಟ್ರೇಡಿಂಗ್ ಸಾಕು ಎಂದು ಬಾಲಚಂದ್ರ ಹೆಗಡೆಯವರು, ಒಪ್ಪಂದದಂತೆ ಶೇ.20 ರಷ್ಟು ಹಣ ಪಾವತಿಸಿ ಇನ್ನುಳಿದ ಹಣ ವಿತ್ ಡ್ರಾ ಮಾಡಲು ಮುಂದಾದಾಗ, ಆರೋಪಿಗಳು ಕ್ರೆಡಿಟ್ ಸ್ಕೋರ್ ಕಡಿಮೆಯಾಗಿದೆ ಎಂದು ಹೇಳಿ ಇನ್ನೂ ₹10 ಲಕ್ಷ ಪಾವತಿಸಿ ಹಣ ಪಡೆಯುವಂತೆ ಒತ್ತಾಯಿಸಿದ್ದಾರೆ.

ಕೊನೆಗೆ ತಾನು ವಂಚನೆಗೊಳಗಾಗಿರುವುದನ್ನು ಅರಿತ ಬಾಲಚಂದ್ರ ಹೆಗಡೆ ನೇರವಾಗಿ ಸಿದ್ದಾಪುರ ಠಾಣೆಯತ್ತ ಮುಖ ಮಾಡಿದ್ದಾರೆ. ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಭಾರತೀಯ ನ್ಯಾಯ ಸಂಹಿತೆ 2023ರ ವಿವಿಧ ಕಲಂಗಳು ಹಾಗೂ ಐಟಿ ಕಾಯ್ದೆಯಡಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.