ಉಡುಪಿ: ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಶನಿವಾರ ಉಡುಪಿ ಶ್ರೀ ಕೃಷ್ಣ ಮಠಕ್ಕೆ ಭೇಟಿ ನೀಡಿ ರತ್ನಖಚಿತ ಕಡಗೋಲು ಶ್ರೀಕೃಷ್ಣನ ದರ್ಶನ ಪಡೆದರು.

 ಬೆಳಗ್ಗೆ 8.45ರ ಬಳಿಕ ಕ್ಷೇತ್ರಕ್ಕೆ ಆಗಮಿಸಿದ ಸಚಿವೆ ನಿರ್ಮಲಾ ಸೀತಾರಾಮನ್ ಅವರಿಗೆ ವಾದ್ಯ ಮೇಳದ ಜತೆ ಮತ್ತೈದೆಯರು ಪೂರ್ಣಕುಂಭ ಸ್ವಾಗತ ನೀಡಿದರು. ಈ ವೇಳೆ ಮಲ್ಲಿಗೆ ಹೂವನ್ನು ಅವರಿಗೆ ನೀಡಲಾಯಿತು. ಆನಂತರ ಅವರು ಬಿಜೆಪಿ ಮುಖಂಡರು ಹಾಗೂ ಅಧಿಕಾರಿಗಳ ಜತೆ ಶ್ರೀ ಅನಂತೇಶ್ವರ ಕ್ಷೇತ್ರಕ್ಕೆ ಭೇಟಿ ನೀಡಿ ದೇವರಿಗೆ ವಿಶೇಷ ಪೂಜೆ ಸಲ್ಲಿಸಿದರು. ಕ್ಷೇತ್ರದ ಪ್ರಧಾನ ಅರ್ಚಕ ವೇದವ್ಯಾಸ ಐತಾಳ್ ಅವರು ಶ್ರೀ ಅನಂತೇಶ್ವರ ಕ್ಷೇತ್ರದ ಕುರಿತ ಪೌರಾಣಿಕ ಕಥೆ ಹಾಗೂ ದೇವಳದ ಮಾಹಿತಿ ನೀಡಿ ಪ್ರಸಾದ ವಿತರಿಸಿದರು. ನಂತರ ಶ್ರೀ ಚಂದ್ರಮೌಳೀಶ್ವರ ಕ್ಷೇತ್ರಕ್ಕೆ ಭೇಟಿ ನೀಡಿದ ಸಚಿವೆ ನಿರ್ಮಲಾ ಸೀತಾರಾಮನ್, ಶಿವನ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿದರು. ದೇವಳದ ಮುಖ್ಯ ಅರ್ಚಕ ಸುಬ್ರಹ್ಮಣ್ಯ ತಂತ್ರಿ ಶ್ರೀ ಚಂದ್ರಮೌಳೇಶ್ವರ ದೇವಸ್ಥಾನದ ಪೌರಾಣಿಕ ಇತಿಹಾಸ ತಿಳಿಸಿ ಪ್ರಸಾದ ನೀಡಿದರು. ಇಲ್ಲಿಂದ ಹೊರಬಂದ ಸಚಿವೆ ತಾಪತ್ರಯ ನಿವಾರಿಸುವ ಕನಕನಕಿಂಡಿಯ ಮೂಲಕ ಶ್ರೀಕೃಷ್ಣದ ದರ್ಶನ ಪಡೆದು ಪುನೀತರಾದರು. ಆನಂತರ ವಾದ್ಯ ಮೇಳ, ಪೂರ್ಣಕುಂಭ ಸ್ವಾಗತದ ಜತೆ ದೇವಳದೊಳಗೆ ಭೇಟಿ ನೀಡಿ ನವಗ್ರಹ ದೋಷ ಪರಿಹಾರ ಮಾಡುವ ನವಗ್ರಹ ಕಿಂಡಿಯಲ್ಲಿ ಶ್ರೀ ಕೃಷ್ಣ ದರ್ಶನ ಮಾಡಿ ಪ್ರಾರ್ಥನೆ ಸಲ್ಲಿಸಿದರು. ಬಳಿಕ ಶ್ರೀ ಮಧ್ವಾಚಾರ್ಯರು ಅನುಷ್ಠಾನ ಮಾಡಿದ ಸ್ಥಳವಾದ ಸರ್ವಜ್ಞ ಪೀಠಕ್ಕೆ ತೆರಳಿ ಪರ್ಯಾಯ ಪೀಠಾಧೀಶರಾದ ಶ್ರೀ ವೇದವರ್ಧನ ತೀರ್ಥ ಶ್ರೀಪಾದರಿಂದ ಫಲ ಹಾಗೂ ಮಂತ್ರಾಕ್ಷತೆ ಪಡೆದುಕೊಂಡರು. ಈ ವೇಳೆ ಕೃಷ್ಣ ಮಠದಲ್ಲಿ ದೇವರ ನೈವೇದ್ಯಕ್ಕಾಗಿ ಹೊಸದಾಗಿ ನಿರ್ಮಿಸಿದ ಅಡುಗೆ ಕೋಣೆ(ಪಾಯದ ಕೋಣೆ)ಯನ್ನು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿದರು. ಕ್ಷೇತ್ರದಿಂದ ಸಚಿವರು ಹಿಂತಿರುಗುವ ವೇಳೆ ದೇವರಿಗೆ ಅಭಿಷೇಕ ಮಾಡಿದ ಹಾಲು, ಗಂಧ, ಹಣ್ಣುಹಂಪಲು ಅವರಿಗೆ ನೀಡಲಾಯಿತು.

 ಈ ಸಂದರ್ಭದಲ್ಲಿ ಶಿರೂರು ಮಠದ ದಿವಾನರಾದ ಉದಯ ಕುಮಾರ್ ಸರಳತ್ತಾಯ ಹಾಗೂ ಪಾರುಪತ್ಯೆಗಾರ ಶ್ರೀಶ ಭಟ್ ಕಡೇಕಾರು, ಉಡುಪಿ ಶಾಸಕ ಯಶಪಾಲ್ ಸುವರ್ಣ, ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿ, ಜಿಲ್ಲಾ ವಕ್ತಾರ ಮಧುಕರ್ ಮುದ್ರಾಡಿ, ಮಠದ ಆಡಳಿತಾಧಿಕಾರಿ ವೆಂಕಟರಮಣ ಮುಚ್ಚಿಂತಾಯ, ವ್ಯವಸ್ಥಾಪಕ ವಾಸುದೇವ ಆಚಾರ್ಯ ಉಪಸ್ಥಿತರಿದ್ದರು.