ಭಟ್ಕಳ: ಭಟ್ಕಳ ಹಾಗೂ ಮುರುಡೇಶ್ವರ ವ್ಯಾಪ್ತಿಯಲ್ಲಿ ಪೊಲೀಸರು ನಡೆಸಿದ ಪ್ರತ್ಯೇಕ ಕಾರ್ಯಾಚರಣೆಯಲ್ಲಿ ಓಸಿ (ಮಟ್ಕಾ) ಜೂಜಾಟ ನಡೆಸುತ್ತಿದ್ದವರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.

ಮೊದಲ ಪ್ರಕರಣದಲ್ಲಿ ಅಳ್ವೇಕೋಡಿಯ ದೇವೇಂದ್ರ ಮಂಜುನಾಥ ನಾಯ್ಕ ಎಂಬಾತ ಶಿರಾಲಿಯ ಚಿತ್ರಾಪುರ ರಸ್ತೆಯ ಸಾರ್ವಜನಿಕ ಸ್ಥಳದಲ್ಲಿ ಜನರಿಂದ ಹಣ ಪಡೆದು ಅಂಕೆ-ಸಂಖ್ಯೆಗಳ ಮೇಲೆ ಹಣ ಪಣಕ್ಕಿಟ್ಟು ಜೂಜಾಟ ನಡೆಸುತ್ತಿದ್ದ ವೇಳೆ ಪೊಲೀಸರು ದಾಳಿ ನಡೆಸಿದ್ದಾರೆ. ಈ ವೇಳೆ ಓಸಿ ಚೀಟಿ ಹಾಗೂ ನಗದನ್ನು ವಶಪಡಿಸಿಕೊಳ್ಳಲಾಗಿದೆ.

ಇನ್ನೊಂದು ಪ್ರಕರಣದಲ್ಲಿ ವಿಷ್ಣು ತಂದೆ ಜರ್ನಾಧನ ನಾಯ್ಕ ಎಂಬಾತ ಬಸ್ತಿ ಮೀನು ಮಾರುಕಟ್ಟೆ ಸಮೀಪದ ಸಾರ್ವಜನಿಕ ಸ್ಥಳದಲ್ಲಿ ಓಸಿ ಮಟ್ಕಾ ಜೂಜಾಟದ ಅಂಕಿ-ಸಂಖ್ಯೆಗಳನ್ನು ಬರೆದುಕೊಡುತ್ತಿದ್ದ ವೇಳೆ ಪೊಲೀಸರು ದಾಳಿ ನಡೆಸಿದ್ದಾರೆ. ಆತನಿಂದಲೂ ಓಸಿ ಚೀಟಿ ಹಾಗೂ ನಗದು ವಶಪಡಿಸಿಕೊಳ್ಳಲಾಗಿದೆ.
ಎರಡೂ ಪ್ರಕರಣಗಳಿಗೆ ಸಂಬಂಧಿಸಿದಂತೆ ಕರ್ನಾಟಕ ಪೊಲೀಸ್ ಕಾಯ್ದೆ ಕಲಂ 78(3) ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ಪೊಲೀಸರು ತನಿಖೆ ಮುಂದುವರಿಸಿದ್ದಾರೆ.