Karwar| ತಾಲೂಕಿನ ಕಡವಾಡದಲ್ಲಿ ಕಾಳಿ ನದಿಗೆ ಅಡ್ಡಲಾಗಿ ನಿರ್ಮಿಸಲಾಗಿದ್ದ, ಸುಮಾರು ಆರು ದಶಕಗಳ ಹಳೆಯ ಸೇತುವೆ ಭಾರೀ ಮಳೆ ಹಾಗೂ ಬಿರುಗಾಳಿಯ ಅಬ್ಬರಕ್ಕೆ ಸೋಮವಾರ ರಾತ್ರಿ ಕುಸಿದು ಬಿದ್ದಿದೆ.
ಮಳೆಯಿಂದಾಗಿ ದುರ್ಬಲಗೊಂಡಿದ್ದ ಸೇತುವೆ ಎರಡು-ಮೂರು ತುಂಡುಗಳಾಗಿ ನದಿಗೆ ಉರುಳಿದ್ದು, ಘಟನಾ ಸಮಯದಲ್ಲಿ ಸೇತುವೆ ಮೇಲೆ ಯಾರೂ ಇಲ್ಲದ ಕಾರಣ ಭಾರಿ ಅನಾಹುತವೊಂದು ತಪ್ಪಿದಂತಾಗಿದೆ.
ಮಾಜಿ ಮುಖ್ಯಮಂತ್ರಿ ದಿವಂಗತ ರಾಮಕೃಷ್ಣ ಹೆಗಡೆ ಅವರಿಂದ ಉದ್ಘಾಟನೆಗೊಂಡಿದ್ದ ಈ ಸೇತುವೆ, ದಶಕಗಳ ಕಾಲ ಕಡವಾಡ ಭಾಗದ ಜನರ ದೈನಂದಿನ ಪ್ರಮುಖ ಸಂಪರ್ಕ ಮಾರ್ಗವಾಗಿತ್ತು. ಕಾಲಕ್ರಮೇಣ ಸೇತುವೆ ದುರ್ಬಲಗೊಂಡ ಹಿನ್ನೆಲೆಯಲ್ಲಿ ವಾಹನ ಹಾಗೂ ಸಾರ್ವಜನಿಕ ಸಂಚಾರವನ್ನು ಸ್ಥಗಿತಗೊಳಿಸಲಾಗಿತ್ತು.
ಆದರೂ, ಇದು ಸ್ಥಳೀಯ ಮೀನುಗಾರರ ಪಾಲಿಗೆ ಜೀವನಾಡಿಯಾಗಿ ಉಳಿದಿತ್ತು. ಪ್ರತಿದಿನ ಬೆಳಗ್ಗೆ ಹಾಗೂ ಸಂಜೆ ವೇಳೆ ನೂರಾರು ಮೀನುಗಾರರು ಸೇತುವೆ ಮೇಲೆ ನಿಂತು ಮೀನುಗಾರಿಕೆ ನಡೆಸುತ್ತಿದ್ದರು. ಮಳೆಗಾಲದಲ್ಲಿಯೂ ಇಲ್ಲಿ ಮೀನುಗಾರರ ಚಟುವಟಿಕೆ ಸಾಮಾನ್ಯವಾಗಿತ್ತು. ಇದೀಗ ಹಲವು ಕುಟುಂಬಗಳ ದಿನನಿತ್ಯದ ಬದುಕಿಗೆ ಆಸರೆಯಾಗಿದ್ದ ಸೇತುವೆ ಕುಸಿದಿರುವುದು ಸ್ಥಳೀಯರಲ್ಲಿ ಬೇಸರ ಮೂಡಿಸಿದೆ.
ಹಳೆಯ ಸೇತುವೆಯ ಪಕ್ಕದಲ್ಲೇ ಈಗಾಗಲೇ ಹೊಸ ಸೇತುವೆ ನಿರ್ಮಾಣಗೊಂಡು ಕಾರ್ಯನಿರ್ವಹಿಸುತ್ತಿದೆ. ಸಾರ್ವಜನಿಕರು ಹಾಗೂ ವಾಹನ ಸವಾರರು ಹೆಚ್ಚಾಗಿ ಹೊಸ ಸೇತುವೆಯನ್ನೇ ಬಳಸುತ್ತಿರುವುದರಿಂದ, ಈ ಹಳೆಯ ಸೇತುವೆಯ ಕುಸಿತದಿಂದಾಗಿ ಯಾವುದೇ ಸಂಪರ್ಕ ಕಡಿತಗೊಂಡಿಲ್ಲ ಮತ್ತು ಸಾರ್ವಜನಿಕರ ಸಂಚಾರಕ್ಕೆ ಯಾವುದೇ ತೊಂದರೆಯಾಗಿಲ್ಲ.
ಘಟನಾ ಸ್ಥಳಕ್ಕೆ ಸಂಬಂಧಪಟ್ಟ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸೇತುವೆಯ ಮಧ್ಯಭಾಗ ಸಂಪೂರ್ಣವಾಗಿ ಕುಸಿದಿರುವುದರಿಂದ, ಸಾರ್ವಜನಿಕರು ಹಾಗೂ ಮೀನುಗಾರರು ಕುಸಿದ ಸೇತುವೆಯ ಬಳಿ ತೆರಳದಂತೆ ಎಚ್ಚರಿಕೆ ನೀಡಲಾಗಿದೆ.
