Karwar| ಮಧ್ಯಪ್ರಾಚ್ಯದಲ್ಲಿ ಉಂಟಾಗಿರುವ ಬಿಕ್ಕಟ್ಟು ಪೆಟ್ರೋಲಿಯಂ ಉತ್ಪನ್ನಗಳ ಪೂರೈಕೆಗೆ ಗಂಭೀರ ಪರಿಣಾಮ ಬೀರಿದ್ದು, ಅದರ ನೇರ ಪರಿಣಾಮ ಸ್ಥಳೀಯ ಮಟ್ಟದಲ್ಲಿಯೂ ಕಾಣಿಸಿಕೊಳ್ಳುತ್ತಿದೆ.
ಅಡುಗೆ ಅನಿಲ (ಎಲ್‌ಪಿಜಿ) ಪೂರೈಕೆ ವ್ಯತ್ಯಯಗೊಂಡ ಹಿನ್ನೆಲೆ ಕಾರವಾರ ಸೇರಿದಂತೆ ಹಲವೆಡೆ ಹೋಟೆಲ್‌ಗಳು ಸಂಕಷ್ಟಕ್ಕೆ ಸಿಲುಕಿವೆ. ಎಲ್‌ಪಿಜಿ ಸಿಲಿಂಡರ್‌ಗಳ ಕೊರತೆಯಿಂದ ಕೆಲವು ಹೋಟೆಲ್‌ಗಳು ತಾತ್ಕಾಲಿಕವಾಗಿ ಬಾಗಿಲು ಮುಚ್ಚಿದ್ದರೆ, ಇನ್ನೂ ಕೆಲವು ಹೋಟೆಲ್‌ಗಳು ಪರ್ಯಾಯವಾಗಿ ಸೌದೆ ಬಳಕೆಗೆ ಮೊರೆ ಹೋಗಿವೆ.
ದಿನದಿಂದ ದಿನಕ್ಕೆ ಹೋಟೆಲ್ ಉದ್ಯಮ ಸೇರಿದಂತೆ ಆತಿಥ್ಯ ವಲಯಕ್ಕೆ ಗ್ಯಾಸ್ ಟ್ರಬಲ್ ಹೆಚ್ಚಿನ ಸಂಕಷ್ಟ ತಂದೊಡುತ್ತಿದೆ. ಇತ್ತ ಹೊಟೆಲ್ ಬಂದ್ ಮಾಡಲೂ ಆಗದೇ ಅತ್ತ ನಡೆಸಲು ಸಹ ಆಗದೇ ತೊಂದರೆ ಅನುಭವಿಸುತ್ತಿರುವ ಹೊಟೆಲ್ ಮಾಲಕರು ಅನಿವಾರ್ಯ ವಾಗಿ ಸೌದೆ ಒಲೆಯತ್ತ ಮುಖ ಮಾಡಿದ್ದಾರೆ.
ಈ ಬಗ್ಗೆ ಹಲವು ಹೊಟೆಲ್ ಮಾಲಕರು newswaveskannada.com ಜತೆ ಮಾತನಾಡಿ, ಸಮರ್ಪಕ ಗ್ಯಾಸ್ ಪೂರೈಕೆ ಇಲ್ಲದೇ ಹೋಟೆಲ್ ನಡೆಸುವುದು ತೊಂದರೆಯಾಗುತ್ತಿದೆ. ಹಲವು ಆಹಾರದ ಐಟಂಗಳನ್ನು ಬಂದ್ ಮಾಡಲಾಗಿದೆ. ಆರ್ಥಿಕವಾಗಿ ನಷ್ಟ ಅನುಭವಿಸುತ್ತಿದ್ದೇವೆ. ಸರ್ಕಾರ ತಕ್ಷಣ ಕ್ರಮ ಕೈಗೊಂಡು ಅನಿಲ ಪೂರೈಕೆಯನ್ನು ಸರಿಪಡಿಸಬೇಕೆಂದು ಆಗ್ರಹಿಸಿದ್ದಾರೆ.
ಇಲ್ಲವಾದರೆ ಮುಂದಿನ ದಿನಗಳಲ್ಲಿ ಸಮಸ್ಯೆ ಮತ್ತಷ್ಟು ತೀವ್ರಗೊಳ್ಳುವ ಸಾಧ್ಯತೆ ಇದೆ ಎಂದು ಎಚ್ಚರಿಕೆ ನೀಡಿದ್ದಾರೆ.
ಮಧ್ಯಪ್ರಾಚ್ಯ ಬಿಕ್ಕಟ್ಟಿನ ಪರಿಣಾಮ ಜಾಗತಿಕ ಮಟ್ಟದಲ್ಲಿ ಇಂಧನ ವಲಯದ ಮೇಲೆ ಬೀರಿರುವ ಒತ್ತಡ ಸ್ಥಳೀಯ ಜೀವನ ಶೈಲಿಯ ಮೇಲೂ ಪರಿಣಾಮ ಬೀರುತ್ತಿರುವುದು ಸ್ಪಷ್ಟವಾಗುತ್ತಿದೆ.
