Mangalore: ಮಧ್ಯಪ್ರಾಚ್ಯದಲ್ಲಿ ಯುದ್ಧ ನಡೆಯುತ್ತಿದ್ದರೂ ಬಹರ್ರೈನ್ ಹಾಗೂ ಕುವೈಟ್‌ನಲ್ಲಿ  ಭಾರತೀಯರು ಯಾವುದೇ ಆತಂಕವಿಲ್ಲದೇ ದುಡಿಯುತ್ತಿದ್ದಾರೆ.

ತಡರಾತ್ರಿ ಅಥವಾ ಮುಂಜಾನೆ ಇರಾನ್‌ನಿಂದ ಹಾರಿಬರುವ ಮಿಸೈಲ್‌ಗಳು ಕೌಂಟರ್ ಸ್ಟ್ರೈಕ್ ಮಿಸೈಲ್‌ಗಳಿಂದ ಆಕಾಶದಲ್ಲೇ ಸಿಡಿದುಹೋಗುವ ದೃಶ್ಯಗಳು ದಿನಾಲೂ ಕಾಣಿಸುತ್ತವೆ. ಆದರೆ,  ಸಾರ್ವಜನಿಕರಿಗೆ ಯಾವುದೇ ತೊಂದರೆಯಾಗದ ಕಾರಣ ಜನಜೀವನ ಎಂದಿನಂತೆ ಮುಂದುವರಿದಿದೆ.

ಮಿಸೈಲ್‌ಗಳು ಹಾರಿ ಬರುತ್ತಿರುವಾಗ ಸೈರನ್‌ಗಳು ಮೊಳಗುತ್ತಿದ್ದು, ಬಹರ್ರೈನ್, ಕುವೈಟ್‌ನಲ್ಲಿ ಜನರು ಯಾರೂ ಆತಂಕಿತರಾಗದೇ ಹೋಟೆಲ್‌ಗಳು, ಮಾಲ್‌ಗಳಲ್ಲಿ ಗೆಳೆಯರು, ಕುಟುಂಬದ ಜತೆ ಹೆಚ್ಚಿನ ಸಂಖ್ಯೆಯಲ್ಲೇ ಓಡಾಡುತ್ತಿದ್ದಾರೆ. ಆದರೆ, ಈ ಯುದ್ಧದ ಪರಿಣಾಮ ಆಹಾರ ವಸ್ತುಗಳು ಹಾಗೂ ವಿಮಾನಯಾನದ ದರ ಹೆಚ್ಚಳವಾಗಿದೆ.

ಭಾರತ ಹಾಗೂ ಇತರ ರಾಷ್ಟ್ರಗಳಿಂದ ಮಾಂಸ, ಮೀನು, ತರಕಾರಿ, ಹಣ್ಣುಹಂಪಲು, ಅಕ್ಕಿ ಮುಂತಾದ ವಸ್ತುಗಳು ಈ ದೇಶಗಳಿಗೆ ರಫ್ತಾಗುತ್ತಿತ್ತು. ಆದರೆ, ಯುದ್ಧದ ಬಳಿಕ ಕಾರ್ಗೋ ಶಿಪ್‌ಗಳ ಓಡಾಟ ಕಡಿಮೆಯಾದ್ದರಿಂದ ಈ ದೇಶಗಳು ಹೊರ ದೇಶಗಳಿಂದ ಆಮದು ಮಾಡಿಕೊಳ್ಳುವಂತಹ ಆಹಾರ ವಸ್ತುಗಳ ದರ ಸಾಕಷ್ಟು ಏರಿಕೆಯಾಗಿದೆ. ಜತೆಗೆ ವಿಮಾನ ಪ್ರಯಾಣದ ದರವೂ ಮೂರರಿಂದ ನಾಲ್ಕು ಪಟ್ಟು ಹೆಚ್ಚಳವಾಗಿರುವುದರಿಂದ ಭಾರತದತ್ತ ಮರಳಲು ಜನರು ಹಿಂದೇಟು ಹಾಕುತ್ತಿದ್ದಾರೆ.

ಬಹರ್ರೈನ್, ಕುವೈಟ್‌ನಲ್ಲಿ ಒಂದೊಂದು ಏರ್‌ಪೋರ್ಟ್ ಇರುವ ಕಾರಣ ಇತ್ತೀಚೆಗೆ ಮಿಸೈಲ್ ದಾಳಿಯ ಬಳಿಕ ಈ ದೇಶಗಳಲ್ಲಿ ಏರ್‌ಪೋರ್ಟ್ ಕಾರ್ಯಾಚರಿಸುವುದು ಸ್ಥಗಿತಗೊಳಿಸಿದೆ. ಈ ಹಿನ್ನೆಲೆ ಜನರು ಭಾರತಕ್ಕೆ ಮರಳಬೇಕಾದರೆ ಸೌದಿಗೆ ರಸ್ತೆ ಮಾರ್ಗವಾಗಿ ತೆರಳಿ ದಮಾಮ್‌ ಮೂಲಕ ಭಾರತ ಹಾಗೂ ಇತರ ದೇಶಗಳತ್ತ ಪ್ರಯಾಣ ಬೆಳೆಸಬೇಕಾಗಿದೆ.

ಇಂಧನ ಪೂರೈಕೆಯ ಕೊರತೆಯ ನಡುವೆ ಗಗನಕ್ಕೆ ಏರಿರುವ ವಿಮಾನ ಟಿಕೆಟ್ ದರ ವಿದೇಶದಲ್ಲಿ ದುಡಿಯುತ್ತಿರುವ ಜನರಿಗೆ ದೊಡ್ಡ ತಲೆ ನೋವಾಗಿ ಪರಿಣಮಿಸಿದೆ. ಕರ್ನಾಟಕದ ಕರಾವಳಿ ಜಿಲ್ಲೆಗಳಲ್ಲಿ ಪ್ರಸ್ತುತ ಜಾತ್ರೆ, ಪೂಜೆ, ಕೋಲ, ನೇಮಗಳು ನಡೆಯುವ ಸಮಯವಾಗಿದ್ದು, ಊರಿಗೆ ತೆರಳಲು ಕಂಪೆನಿಗಳಿಂದ ಮೊದಲೇ ತಿಂಗಳ ಕಾಲ ರಜೆ ಪಡೆದಿದ್ದ ಕೆಲವು ಕಾರ್ಮಿಕರು ವಿಮಾನ ಟಿಕೆಟ್ ದರ ಮೂರ್ನಾಲ್ಕು ಪಟ್ಟು ಹೆಚ್ಚಳದಿಂದ ವೆಚ್ಚ ಭರಿಸಲಾಗದೇ ವಾಪಾಸ್ ಕೆಲಸಕ್ಕೂ ತೆರಳಲಾಗದೇ ರೂಮಿನಲ್ಲಿ ಕುಳಿತು ದಿನದೂಡುತ್ತಿರುವ ಪ್ರಕರಣಗಳೂ ನಡೆಯುತ್ತಿವೆ.