ಒಂದೆಡೆ ಬಂಗಾರದ ಬೆಲೆ ಗಗನಕ್ಕೆ ಏರುತ್ತಿದ್ರೂ ಜನರಿಗೆ ಬಂಗಾರದ ಮೇಲಿನ ಆಸೆಯೇನೂ ಕಮ್ಮಿಯಾಗಿಲ್ಲ. ಇದರ ಜತೆ ಬಂಗಾರ ಕದಿಯಲು ಹೊಂಚು ಹಾಕುತ್ತಿರುವವರ ಸಂಖ್ಯೆಯೂ ಅಷ್ಟೇ ಹೆಚ್ಚುತ್ತಿದೆ. ಇದೇ ರೀತಿಯಲ್ಲಿ ಬಂಗಾರ ಕದಿಯೋ ಯೋಜನೆ ಹಾಕಿದ್ದ ಖದೀಮನೊಬ್ಬ ವೃದ್ಧೆಯೋರ್ವಳನ್ನು ಬರ್ಬರವಾಗಿ ಕೊಲೆ ಮಾಡಿದ್ದಾನೆ. ಕೊಲೆ ಮಾಡಿದ ಬಳಿಕವೂ ತನಗೇನೂ ಗೊತ್ತಿಲ್ಲದಂತೆ ಮುಗ್ಧನಂತೆ ವರ್ತಿಸ್ತಿದ್ದ ಈತ, ಕೊನೆಗೂ ಪೊಲೀಸರ ಅತಿಥಿಯಾಗಿದ್ದಾನೆ.
ಹೌದು, ಉತ್ತರಕನ್ನಡ ಜಿಲ್ಲೆಯ ಮುಂಡಗೋಡ ತಾಲೂಕಿನ ಮಳಗಿಯ ಕೊಳಗಿ ಅರಣ್ಯಪ್ರದೇಶದಲ್ಲಿ ಫೆ. 19ರಂದು ರುಂಡವಿಲ್ಲದೇ ಬೆತ್ತಲೆಯಾಗಿ ಬಿದ್ದಿದ್ದ ಮಹಿಳೆಯ ಶವ ಪತ್ತೆಯಾಗಿತ್ತು. ಮಹಿಳೆಯ ಮೇಲೆ ಅತ್ಯಾಚಾರ ಎಸಗಿ ಯಾರಾದರೂ ರುಂಡ ಕಡೆದು ಪರಾರಿಯಾಗಿದ್ದಾರಾ ಅನ್ನೋ ಸಾಕಷ್ಟು ಅನುಮಾನ ವ್ಯಕ್ತವಾಗಿತ್ತು. ಆದರೆ, ಮಹಿಳೆಯ ರುಂಡವೇ ಸಿಗದೇ ಇರೋದು ನೋಡಿ ವೈಯಕ್ತಿಕ ದ್ವೇಷಕ್ಕೆ ಕೊಲೆ ಮಾಡಿರಬಹುದು ಎನ್ನುವ ಅನುಮಾನ ಕೂಡಾ ಬಂದಿತ್ತು.

ಪ್ರಕರಣವನ್ನು ಗಂಭೀರವಾಗಿ ತೆಗೆದುಕೊಂಡಿದ್ದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ದೀಪನ್ ಎಂ.ಎನ್. ಪ್ರಕರಣ ಭೇದಿಸಲು ವಿಶೇಷ ತಂಡವನ್ನ ರಚಿಸಿ, ಮಾರ್ಗದರ್ಶನ ನೀಡಲು ಗೋಕರ್ಣ ಪಿಐ ಶ್ರೀಧರ್ ಅವರನ್ನು ನೇಮಿಸಲಾಗಿತ್ತು. ಮೊದಲು ಅಪರಿಚಿತ ಮಹಿಳೆ ಯಾರು ಎಂದು ಹುಡುಕಾಟಕ್ಕೆ ಮುಂದಾದ ಪೊಲೀಸರಿಗೆ ಮುಂಡಗೋಡ ತಾಲೂಕಿನ ಮಳಗಿ ಗ್ರಾಮದ 80 ವರ್ಷದ ಶಿವಕ್ಕ ಸೋಮನಗೌಡ ಪಾಟೀಲ ಎನ್ನುವ ವೃದ್ದ ಮಹಿಳೆ ಕೆಲವು ದಿನದಿಂದ ನಾಪತ್ತೆಯಾಗಿರುವುದು ಬೆಳಕಿಗೆ ಬಂದಿತ್ತು.
ಈಕೆಗೆ ಇಬ್ಬರು ಹೆಣ್ಣು ಮಕ್ಕಳು, ಓರ್ವ ಗಂಡು ಮಗನಿದ್ದು, ಗಂಡ ಸುಮಾರು 30 ವರ್ಷಗಳ ಹಿಂದೆಯೇ ತೀರಿಕೊಂಡಿದ್ದ. ಸಣ್ಣ ಕಿರಾಣಿ ಅಂಗಡಿ ನಡೆಸಿಕೊಂಡಿದ್ದ ಈ ಅಜ್ಜಿಯ ಮಕ್ಕಳು ಶಿರಸಿ, ಯಲ್ಲಾಪುರದಲ್ಲಿ ವಾಸವಾಗಿದ್ದು, ಆಗಾಗ ದೊಡ್ಡ ಮಗಳು ಮನೆಗೆ ಬಂದು ಹೋಗುತ್ತಿದ್ದಳು.
ರುಂಡವಿಲ್ಲದ ಮಹಿಳೆಯ ಮೃತದೇಹವನ್ನು ಕಾರವಾರದ ಕ್ರಿಮ್ಸ್ ಆಸ್ಪತ್ರೆಯ ಶವಾಗಾರದಲ್ಲಿ ಪೊಲೀಸರು ಇರಿಸಿದ್ದು, ಘಟನಾ ಸ್ಥಳದಲ್ಲಿದ್ದ ಚೈನ್, ಬಳೆಚೂರು, ಫಾರೆನ್ಸಿಕ್ ರಿಪೋರ್ಟ್ ಹಾಗೂ ಡಿಎನ್ಎ ರಿಪೋರ್ಟ್ ಮೇಲೆ ಗುರುತು ಪತ್ತೆ ಮಾಡಿ ಈಕೆಯೇ ಶಿವಕ್ಕ ಪಾಟೀಲ್ ಎಂದು ಅಂತಿಮ ನಿರ್ಧಾರಕ್ಕೆ ಬಂದಿದ್ದರು.

ಪ್ರಾರಂಭದಲ್ಲಿ ಕೌಟಂಬಿಕ ಕಲಹದಿಂದ ಕೊಲೆ ಆಗಿರಬಹುದೇ ಎಂದು ಸಂಶಯ ವ್ಯಕ್ತಪಡಿಸಿದ್ದ ಪೊಲೀಸರಿಗೆ, ಅದ್ಯಾವುದು ಇಲ್ಲ ಎಂದು ತಿಳಿದ ಬಳಿಕ ಬೇರೆಯೇ ಸಂಶಯ ಮೂಡಿಸಿತ್ತು. ಸಿಸಿ ಟಿವಿ ಸಾಕ್ಷ್ಯಗಳು ಹಾಗೂ ವೃದ್ಧೆ ಅಪರಿಚಿತ ವ್ಯಕ್ತಿಯೋರ್ವನ ಜೊತೆ ಬೈಕ್ ನಲ್ಲಿ ಹೋಗಿರುವ ಮಾಹಿತಿ ತಿಳಿದಾಗ ಹುಡುಕಾಟಕ್ಕೆ ಇಳಿದಿದ್ರು. ಆಗಲೇ ಸಿಕ್ಕಿದ್ದು ಈ ಆರೋಪಿ 40 ವರ್ಷದ ಶಿವಮೊಗ್ಗ ಸೊರಬ ಮೂಲದ ಕೃಷ್ಣಪ್ಪ ಸಿದ್ಧಪ್ಪ ಮೇದಾರ್.
ಮಳಗಿಯಲ್ಲಿ ವೃದ್ಧೆಯ ಮನೆಯ ಮುಂದೆಯೇ ಕಳೆದ 6 ತಿಂಗಳಿನಿಂದ ಬಾಡಿಗೆಗಿದ್ದ ಈ ಆರೋಪಿ ಕೃಷ್ಣಪ್ಪನನ್ನು ಹಿಡಿದು ವಿಚಾರಣೆಗೆ ಒಳಪಡಿಸಿದಾಗ ಆತ ಎಲ್ಲವನ್ನೂ ಬಾಯಿಬಿಟ್ಟಿದ್ದಾನೆ. ಅಲ್ಲಿಯವರೆಗೆ ತನಗೇನೂ ಗೊತ್ತಿಲ್ಲದಂತೆ ಮುಗ್ಧನಂತೆ ವರ್ತಿಸ್ತಿದ್ದ ಈತ, ಕೊಲೆ ಮಾಡಿದ ಬಳಿಕ ಎರಡು ದಿನ ಅದೇ ಬಾಡಿಗೆ ಮನೆಯಲ್ಲಿದ್ದು, ಬಳಿಕ ಬೆಂಗಳೂರು, ಶಿರಸಿ ಮುಂತಾದೆಡೆ ತಿರುಗಿಕೊಂಡು ಬಂದಿದ್ದ. ಈತನನ್ನು ಪೊಲೀಸರು ಬಿಸಿಲುಕೊಪ್ಪದ ಬಳಿ ಬಂಧಿಸಿ, ವಿಚಾರಣೆಗೆ ಒಳಪಡಿಸಿದ್ದರು.
ವಿಚಾರಣೆ ವೇಳೆ ತಾನು ಚಿನ್ನದ ಒಡವೆಯ ಆಸೆಗಾಗಿ ವೃದ್ಧೆಯನ್ನು ಕೊಲೆ ಮಾಡಿದ್ದಾಗಿ ತಿಳಿಸಿದ್ದಾನೆ. ನೆರೆಮನೆಯವರ ಜತೆ ಉತ್ತಮ ಬಾಂಧವ್ಯ ಹೊಂದಿದ್ದ ಶಿವಕ್ಕ, ಎಲ್ಲರ ಜತೆ ಮಾತನಾಡುತ್ತಿದ್ದರು. ಆದರೆ, ಶಿವಕ್ಕ ಮನೆಯಲ್ಲಿ ಒಂಟಿಯಾಗಿ ಇದ್ದದ್ರಿಂದ ಆರೋಪಿ ಕೃಷ್ಣಪ್ಪ ಮೇಧಾರನಿಗೆ ಆಕೆಯ ಚಿನ್ನದ ಮೇಲೆ ಕಣ್ಣಿತ್ತು.
ಶಿವಕ್ಕನಿಗೆ ಸಣ್ಣ ಪುಟ್ಟ ಸಹಾಯ ಮಾಡ್ತಾ ನಂಬಿಕೆ ಗಳಿಸಿದ್ದ ಈ ಆರೋಪಿ ಫೆ. 19ರಂದು ಆಕೆಗೆ ಮೈ ಹುಷಾರಿಲ್ಲದಾಗ ಹಾನಗಲ್ನಲ್ಲಿ ಆಸ್ಪತ್ರೆಗೆ ಕರೆದೊಯ್ಯವುದಾಗಿ ಬೈಕ್ನಲ್ಲಿ ಕೂರಿಸಿ ಕರೆದೊಯ್ದಿದ್ದ. ಆಕೆಯ ಚಿನ್ನ ಕಳ್ಳತನಕ್ಕೆ ಇದೇ ಅವಕಾಶ ಎಂದು ಪ್ಲ್ಹಾನ್ ಹಾಕಿ ದಾರಿ ಮಧ್ಯೆ ಮೂತ್ರವಿಸರ್ಜನೆ ಮಾಡಬೇಕೆಂದು ಕಾಡಿನ ದಾರಿಯ ಒಳಗೋಗಿದ್ದ. ಅಲ್ಲಿ ಶಿವಕ್ಕನ ಕುತ್ತಿಗೆ ಕುಯ್ದು ಚೈನ್, ಬಳೆ, ಇತರ ವಸ್ತು ಸೇರಿ ಸುಮಾರು 50 ಗ್ರಾಂ ಚಿನ್ನ ಎಗರಿಸಿದ್ದ. ಬಳಿಕ ರಾತ್ರಿ ಮತ್ತೆ ಬಂದು ಕತ್ತಿಯಿಂದ ಮೃತದೇಹದ ತಲೆ ಕಡಿದು, ಸೀರೆ, ಒಳ ಉಡುಪು ಕೊಂಡೊಯ್ದಿದ್ದ. ಈ ವೇಳೆ ಮೃತದೇಹವನ್ನು ಸುಮಾರು 50 ಮೀಟರ್ ದೂರಕ್ಕೆ ಶಿಫ್ಟ್ ಮಾಡಿದ್ದ.
ಹಾನಗಲ್ ಮಳಗಿ ತೆರಳುವ ದಾರಿಯಲ್ಲಿ ಕಾಮನಹಳ್ಳಿ ಎಂಬಲ್ಲಿ ಮೃತ ಮಹಿಳೆಯ ತಲೆ, ತನ್ನ ಬಟ್ಟೆ ಮತ್ತು ಮೃತ ಮಹಿಳೆ ಸೀರೆ, ಒಳ ಉಡುಪುಗಳನ್ನು ಸುಟ್ಟು ಹಾಕಿ ಪ್ರಕರಣ ಬೇರೆ ದಿಕ್ಕಿಗೆ ತಿರುಗಿ ಪೊಲೀಸರಿಗೆ ಸುಳಿವು ಸಿಗದಂತೆ ಕೃತ್ಯ ಎಸಗಿದ್ದ. ಆದರೆ, ಪೊಲೀಸರು ಚಾಕಚಕ್ಯತೆಯಿಂದ ಆತನ ಹೆಡೆಮುರಿ ಕಟ್ಟಿದ್ದಾರೆ.
ಅಂದಹಾಗೆ, ಈತನ ವಿರುದ್ಧ 2022ರಲ್ಲಿ ಸೊರಬಾ ಠಾಣೆಯಲ್ಲಿ ಮರ್ಡರ್ ಕೇಸ್ ದಾಖಲಾಗಿದ್ದು, ಇತರ ಆರೋಪಿಗಳ ಜತೆ ಸೇರಿ ವ್ಯಕ್ತಿಯೋರ್ವನ ಕೊಲೆ ಮಾಡಿ ಗೋಣಿಚೀಲದಲ್ಲಿ ಕಟ್ಟಿ ಹೊಳೆಗೆ ಬಿಸಾಕಿದ್ದ. ಈ ಪ್ರಕರಣದಲ್ಲಿ 10 ತಿಂಗಳ ಬಳಿಕ ಬೇಲ್ ಮೇಲೆ ಹೊರಬಂದಿದ್ದ. ಸೊರಬಾ ಬಿಟ್ಟು ಹೆಂಡತಿ ಮಳಗಿಯಲ್ಲಿ ಬಾಡಿಗೆ ಮನೆಯಲ್ಲಿ ನೆಲೆಸಿದ್ದ ಈತ, ಶಿವಕ್ಕನ ಚಿನ್ನದ ಮೇಲೆ ಕಣ್ಣಿಟ್ಟು, ಪೊಲೀಸರಿಗೆ ಸಿಕ್ಕಿಬೀಳದಂತೆ ತನ್ನ ಮೊಬೈಲ್ ಮನೆಯಲ್ಲಿಟ್ಟು ಆಕೆಯನ್ನು ನಂಬಿಸಿ ಕೊಲೆ ಮಾಡಿದ್ದ. ಆದರೆ, ಚಾಪೆಯಡಿ ತೂರಲು ಯತ್ನಿಸಿದ್ದ ಆರೋಪಿಯನ್ನು ರಂಗೋಲಿಯಡಿ ಹೊಕ್ಕಿ ಹಿಡಿದು ಸೆರೆಮನೆಗಟ್ಟಿದ್ದ ಉತ್ತರಕನ್ನಡ ಜಿಲ್ಲಾ ಪೊಲೀಸರ ಕಾರ್ಯಕ್ಕೆ ಜನರು ಭೇಷ್ ಅಂದಿದ್ದಾರೆ.
