Karwar|Heat waves| Alert
ಭಾರತೀಯ ಹವಾಮಾನ ಇಲಾಖೆಯ ಮುನ್ಸೂಚನೆಯ ಪ್ರಕಾರ ನಾಳೆ ಫೆಬ್ರವರಿ 17 ಮತ್ತು 18 ರ ವರೆಗೆ ಗರಿಷ್ಠ ಉಷ್ಣಾಂಶವು ಸುಮಾರು 34 ಡಿಗ್ರಿ ಸೆಲ್ಸಿಯಸ್ ರಿಂದ 38.9 ಡಿಗ್ರಿ ಸೆಲ್ಸಿಯಸ್ ವರೆಗೆ ಏರಿಕೆಯಾಗುವ ಸಾಧ್ಯತೆ ಇದ್ದು, ಸಾರ್ವಜನಿಕರು ಜಾಗೃತೆ‌ವಹಿಸುವಂತೆ ಜಿಲ್ಲಾಡಳಿತ ತಿಳಿಸಿದೆ.

ಸಾರ್ವಜನಿಕರು ಈ ಎರಡು ದಿನದಂದು ಪ್ರಸ್ತುತ ಸಾಮಾನ್ಯ ಉಷ್ಣತೆಗಿಂತ ಸುಮಾರು 3 ರಿಂದ 4 ಡಿಗ್ರಿ ಸೆಲ್ಸಿಯಸ್ ಹೆಚ್ಚುವರಿ ಉಷ್ಣತೆಯನ್ನು ಅನುಭವಿಸುವ ಸಾಧ್ಯತೆಯಿದೆ. ಈ ರೀತಿಯ ಉಷ್ಣಾಂಶದ ಏರಿಕೆ ದೇಹದ ಉಷ್ಣ ನಿಯಂತ್ರಣ ವ್ಯವಸ್ಥೆಗೆ ಒತ್ತಡ ಉಂಟುಮಾಡಿ ಆರೋಗ್ಯದ ಮೇಲೆ ಪ್ರತಿಕೂಲ ಪರಿಣಾಮ ಬೀರುವ ಸಾಧ್ಯತೆ ಇದೆ. ಹೆಚ್ಚಿದ ಬಿಸಿಲಿನ ಪರಿಣಾಮವಾಗಿ ದೇಹದಲ್ಲಿ ನೀರಿನ ಕೊರತೆ (Dehydration), ತಲೆ ಸುತ್ತುವುದು, ದೌರ್ಬಲ್ಯ, ಅತಿಯಾದ ದಣಿವು, ತಲೆನೋವು, ಚರ್ಮದ ಒಣತನ ಹಾಗೂ ಉಷ್ಣಾಘಾತ (Heat Stroke) ಸೇರಿದಂತೆ ಉಷ್ಣತೆಯ ಸಂಬಂಧಿತ ಆರೋಗ್ಯ ಸಮಸ್ಯೆಗಳು ಉಂಟಾಗುವ ಸಾಧ್ಯತೆ ಇದೆ.

ಈ ಹಿನ್ನೆಲೆಯಲ್ಲಿ ಸಾರ್ವಜನಿಕರ ಆರೋಗ್ಯ ಮತ್ತು ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು, ಉತ್ತರ ಕನ್ನಡ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರವು ಉಷ್ಣಾಂಶದ ಪರಿಣಾಮಗಳನ್ನು ತಗ್ಗಿಸುವ ಉದ್ದೇಶದಿಂದ ಅಗತ್ಯ ಮುನ್ನೆಚ್ಚರಿಕಾ ಕ್ರಮಗಳನ್ನು ಪಾಲಿಸುವಂತೆ ಸಾರ್ವಜನಿಕರ ಗಮನಕ್ಕೆ ತಂದಿದೆ.

ಹೆಚ್ಚಿನ ಉಷ್ಣಾಂಶದಿಂದ ಉಂಟಾಗುವ ಆರೋಗ್ಯ ಅಪಾಯಗಳನ್ನು ತಪ್ಪಿಸಲು ಹಾಗೂ ಸುರಕ್ಷಿತವಾಗಿರಲು ಸಂಬಂಧಿತ ಸೂಚನೆಗಳನ್ನು ಕಟ್ಟುನಿಟ್ಟಾಗಿ ಪಾಲಿಸಲು ಸಾರ್ವಜನಿಕರು ಸಹಕರಿಸಬೇಕಾಗಿ ತಿಳಿಸಿದೆ.

ಮಾಡಬೇಕಾದವುಗಳು: ದಿನಪೂರ್ತಿ ಸಾಕಷ್ಟು ನೀರು ಕುಡಿಯಿರಿ. ದಾಹವಾಗದಿದ್ದರೂ ನೀರನ್ನು ನಿಯಮಿತವಾಗಿ ಸೇವಿಸಿ. ORS, ನಿಂಬೆ ನೀರು, ಮಜ್ಜಿಗೆ, ತೆಂಗಿನ ನೀರು ಮುಂತಾದ ದ್ರವಗಳನ್ನು ಹೆಚ್ಚಾಗಿ ಸೇವಿಸಿ.

ಹಗುರವಾದ, ತೆಳುವಾದ ಬಣ್ಣದ ಹಾಗೂ ಸಡಿಲವಾದ ಹತ್ತಿ ಬಟ್ಟೆಗಳನ್ನು ಧರಿಸಿ. ತಲೆ ಮತ್ತು ಮುಖವನ್ನು ಟೋಪಿ, ಛತ್ರಿ, ಗಮಚಾ ಅಥವಾ ರುಮಾಲಿನಿಂದ ಮುಚ್ಚಿಕೊಳ್ಳಿ.

ಸಾಧ್ಯವಾದಷ್ಟು ತೀವ್ರ ಬಿಸಿಲಿನ ಸಮಯದಲ್ಲಿ (ಮಧ್ಯಾಹ್ನ 12 ರಿಂದ ಸಂಜೆ 4 ಗಂಟೆಯವರೆಗೆ) ಹೊರಗೆ ಹೋಗುವುದನ್ನು ತಪ್ಪಿಸಿ. ಹೊರಗೆ ಕೆಲಸ ಮಾಡುವಾಗ ಮಧ್ಯಂತರವಾಗಿ ನೆರಳಿನಲ್ಲಿ ವಿಶ್ರಾಂತಿ ತೆಗೆದುಕೊಳ್ಳಿ.

ಮಕ್ಕಳು, ವೃದ್ಧರು, ಗರ್ಭಿಣಿಯರು ಹಾಗೂ ಅಸ್ವಸ್ಥರಿಗೆ ವಿಶೇಷ ಕಾಳಜಿ ವಹಿಸಿ. ತಲೆಸುತ್ತು, ಅತಿಯಾದ ದೌರ್ಬಲ್ಯ, ವಾಂತಿ, ಜ್ವರ ಅಥವಾ ಅಸ್ವಸ್ಥತೆಯ ಲಕ್ಷಣಗಳು ಕಂಡುಬಂದರೆ ತಕ್ಷಣ ವೈದ್ಯರನ್ನು ಸಂಪರ್ಕಿಸಿ. ಮನೆ ಮತ್ತು ಕೆಲಸದ ಸ್ಥಳಗಳಲ್ಲಿ ಸಮರ್ಪಕ ಗಾಳಿ ಹರಿವಿಗೆ ಅವಕಾಶ ಕಲ್ಪಿಸಿ.

ಮಾಡಬಾರದು: ತೀವ್ರ ಬಿಸಿಲಿನ ಸಮಯದಲ್ಲಿ ಅನಾವಶ್ಯಕವಾಗಿ ಹೊರಗೆ ಹೋಗಬೇಡಿ. ಮದ್ಯಪಾನ, ಅಧಿಕ ಕಾಫಿ ಅಥವಾ ಹೆಚ್ಚು ಸಿಹಿ ಪಾನೀಯಗಳನ್ನು ಸೇವಿಸಬೇಡಿ.

ತೀವ್ರ ಬಿಸಿಲಿನ ಸಮಯದಲ್ಲಿ ಕಠಿಣ ಶಾರೀರಿಕ ಕೆಲಸಗಳನ್ನು ಮಾಡಬೇಡಿ. ಮಕ್ಕಳನ್ನು ಅಥವಾ ಪ್ರಾಣಿಗಳನ್ನು ಮುಚ್ಚಿದ ವಾಹನಗಳಲ್ಲಿ ಬಿಟ್ಟು ಹೋಗಬೇಡಿ.

ಅತಿಯಾದ ಮಸಾಲೆ ಮತ್ತು ಎಣ್ಣೆಯುಕ್ತ ಆಹಾರವನ್ನು ಸೇವಿಸಬೇಡಿ. ಉಷ್ಣಾಘಾತದ ಲಕ್ಷಣಗಳನ್ನು ನಿರ್ಲಕ್ಷಿಸಬೇಡಿ. ತಲೆ ಮುಚ್ಚಿಕೊಳ್ಳದೆ ನೇರವಾಗಿ ಬಿಸಿಲಿಗೆ ಒಡ್ಡಿಕೊಳ್ಳಬೇಡಿ.

ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರವು ಸಾರ್ವಜನಿಕರ ಸಹಕಾರವನ್ನು ಕೋರುತ್ತಿದ್ದು, ಯಾವುದೇ ತುರ್ತು ಪರಿಸ್ಥಿತಿಯಲ್ಲಿ ಸಹಾಯವಾಣಿ ಸಂಖ್ಯೆ  1077 / 9483511015(Whatsapp) ಗೆ  ಸಂಪರ್ಕಿಸುವಂತೆ ಜಿಲ್ಲಾಧಿಕಾರಿ ಕೆ.ಲಕ್ಷ್ಮಿಪ್ರಿಯಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.