ಕಾರವಾರ: ರಾಜ್ಯದಲ್ಲಿ ಆಡಳಿತದಲ್ಲಿರುವ ಕಾಂಗ್ರೆಸ್ ಪಕ್ಷವು ಜಿಲ್ಲಾ ಘಟಕಗಳ ಪುನರ್‌ರಚನೆಗೆ ಚಾಲನೆ ನೀಡಿದ್ದು, ಜಿಲ್ಲಾಧ್ಯಕ್ಷರ ಬದಲಾವಣೆ ಪ್ರಕ್ರಿಯೆ ಆರಂಭವಾಗಿದೆ. ಇದರ ಭಾಗವಾಗಿ ಉತ್ತರ ಕನ್ನಡ ಜಿಲ್ಲಾ ಕಾಂಗ್ರೆಸ್‌ಗೆ ನೂತನ ಅಧ್ಯಕ್ಷರ ಆಯ್ಕೆ ಸಂಬಂಧ ನಾಳೆ ಭಾನುವಾರ ಶಿರಸಿಯಲ್ಲಿ ಎಐಸಿಸಿ ಹಾಗೂ ಕೆಪಿಸಿಸಿ ಮುಖಂಡರ ನೇತೃತ್ವದಲ್ಲಿ ಮಹತ್ವದ ಸಭೆ ನಡೆಯಲಿದೆ ಎಂದು ಪಕ್ಷದ ಮೂಲಗಳು ತಿಳಿಸಿವೆ.
ಈ ಬಾರಿ ಜಿಲ್ಲಾಧ್ಯಕ್ಷರ ಆಯ್ಕೆ ಪ್ರಕ್ರಿಯೆಗೆ ಹೊಸ ಮಾನದಂಡವನ್ನು ಅನುಸರಿಸಲಾಗುತ್ತಿದೆ. ಅಧ್ಯಕ್ಷ ಸ್ಥಾನಕ್ಕೆ ಆಸಕ್ತರು ಮೊದಲು ಉಮೇದುವಾರಿಕೆ ಸಲ್ಲಿಸಲು ಅವಕಾಶ ನೀಡಲಾಗಿದೆ. ನಂತರ ಎಐಸಿಸಿ ಮತ್ತು ಕೆಪಿಸಿಸಿ ಪ್ರತಿನಿಧಿಗಳು ಜಿಲ್ಲೆಯ ವಿವಿಧ ಬ್ಲಾಕ್ ಕಾಂಗ್ರೆಸ್ ಕಚೇರಿಗಳಲ್ಲಿ ಸಭೆ ನಡೆಸಿ ಸ್ಥಳೀಯ ಮುಖಂಡರು ಹಾಗೂ ಕಾರ್ಯಕರ್ತರ ಅಭಿಪ್ರಾಯ ಸಂಗ್ರಹಿಸಲಿದ್ದಾರೆ. ಈ ವರದಿಯನ್ನು 10 ದಿನಗಳೊಳಗೆ ಕೆಪಿಸಿಸಿಗೆ ಸಲ್ಲಿಸುವಂತೆ ರಾಜ್ಯ ಕಾಂಗ್ರೆಸ್ ಅಧ್ಯಕ್ಷ ಬಿ.ಕೆ. ಹರಿಪ್ರಸಾದ್ ಸೂಚನೆ ನೀಡಿದ್ದಾರೆ ಎಂದು ತಿಳಿದುಬಂದಿದೆ.
ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರದಲ್ಲಿರುವ ಹಿನ್ನೆಲೆಯಲ್ಲಿ ಜಿಲ್ಲಾಧ್ಯಕ್ಷ ಸ್ಥಾನಕ್ಕೆ ಈ ಬಾರಿ ಹೆಚ್ಚಿನ ಪೈಪೋಟಿ ಕಂಡುಬಂದಿದೆ. ಉತ್ತರ ಕನ್ನಡ ಜಿಲ್ಲೆಯಲ್ಲಿ ಈಗಾಗಲೇ ಡಜನ್‌ಗಿಂತ ಹೆಚ್ಚು ಆಕಾಂಕ್ಷಿಗಳು ಹೆಸರು ಕೇಳಿಬರುತ್ತಿದ್ದು, ಹಲವು ಹಿರಿಯ ಹಾಗೂ ಯುವ ಮುಖಂಡರು ಕಣದಲ್ಲಿದ್ದಾರೆ.
ಪ್ರಸ್ತುತ ಜಿಲ್ಲಾಧ್ಯಕ್ಷ ಸಾಯಿ ಗಾಂವ್ಕರ್ ಕರಾವಳಿ ಭಾಗದವರಾಗಿರುವುದರಿಂದ ಈ ಬಾರಿ ಘಟ್ಟದ ಮೇಲಿನ ಭಾಗದ ನಾಯಕರಿಗೆ ಅವಕಾಶ ದೊರೆಯುವ ಸಾಧ್ಯತೆ ಇದೆ ಎಂಬ ಮಾತು ಪಕ್ಷದ ವಲಯದಲ್ಲಿ ಕೇಳಿಬರುತ್ತಿದೆ. ಶಿರಸಿಯ ದೀಪಕ್ ದೊಡ್ಡೂರು ಪ್ರಮುಖ ಆಕಾಂಕ್ಷಿಯಾಗಿದ್ದು, ಸಿದ್ದಾಪುರದ ವಸಂತ ನಾಯ್ಕ ಹಾಗೂ ವಕೀಲ ಜಿ.ಟಿ. ನಾಯ್ಕ ಅವರ ಹೆಸರೂ ಪ್ರಬಲವಾಗಿ ಚರ್ಚೆಯಲ್ಲಿದೆ.
ಇನ್ನೊಂದೆಡೆ ಜಿಲ್ಲಾ ಗ್ಯಾರಂಟಿ ಸಮಿತಿ ಅಧ್ಯಕ್ಷ ಸತೀಶ ನಾಯ್ಕ ಹಾಗೂ ಕರಾವಳಿ ಭಾಗದಿಂದ ಎಲ್. ಮಂಜುನಾಥ ನಾಯ್ಕ ಅವರ ಹೆಸರೂ ಆಕಾಂಕ್ಷಿಗಳ ಪಟ್ಟಿಯಲ್ಲಿದೆ. ಸಾಯಿ ಗಾಂವ್ಕರ್ ಅವರೂ ಸಹ ಮತ್ತೊಂದು ಅವಧಿಗೆ ಅವಕಾಶ ಕೇಳುವ ಸಾಧ್ಯತೆ ಇದೆ ಎನ್ನಲಾಗಿದೆ.
ಮುಂದಿನ ದಿನಗಳಲ್ಲಿ ವಿಧಾನಸಭೆ, ಸ್ಥಳೀಯ ಸಂಸ್ಥೆಗಳು, ಗ್ರಾಮ ಪಂಚಾಯಿತಿ ಹಾಗೂ ಜಿಲ್ಲಾ ಪಂಚಾಯಿತಿ ಸೇರಿದಂತೆ ಪ್ರಮುಖ ಚುನಾವಣೆಗಳು ಎದುರಾಗಲಿರುವುದರಿಂದ ಸಂಘಟನಾ ಸಾಮರ್ಥ್ಯ ಹೊಂದಿರುವ ನಾಯಕನಿಗೆ ಜಿಲ್ಲಾಧ್ಯಕ್ಷ ಸ್ಥಾನ ನೀಡುವ ಸಾಧ್ಯತೆ ಹೆಚ್ಚಿದೆ ಎನ್ನಲಾಗುತ್ತಿದೆ.
ಸಾಯಿ ಗಾಂವ್ಕರ್ ಅವರ ಅವಧಿಯಲ್ಲಿ ಜಿಲ್ಲೆಯಲ್ಲಿ ಪಕ್ಷ ಸಂಘಟನೆ ನೆಲಕಚ್ಚಿದ್ದು, ಮಕಾಡೆ ಮಲಗಿದ ಪಕ್ಷದ ಹುರಿಯಾಳುಗಳನ್ನು ಪಕ್ಷದ ಕಟ್ಟಾಳುಗಳನ್ನಾಗಿಸಲು ಪ್ರಬಲ ನಾಯಕನ ಅಗತ್ಯತೆ ಇದೆ. ಆ ಹಿನ್ನಲೆಯಲ್ಲಿ ಕಳೆದ ಬಾರಿ ಅಧ್ಯಕ್ಷ ರಾಗಿ ಯಶಸ್ವಿ ಸಂಘಟಕ ಎನಿಸಿಕೊಂಡಿರುವ ಶಿರಸಿ ಕ್ಷೇತ್ರದ ಶಾಸಕ ಭೀಮಣ್ಣ ನಾಯ್ಕ ಅವರಿಗೆ ಪಕ್ಷದ ನೊಗ ಹೊರುವ ಅವಕಾಶ ಸಿಕ್ಕಿದರೂ ಆಶ್ಚರ್ಯ ಪಡಬೇಕಾಗಿಲ್ಲ.
