ಕಾರವಾರ: ಕೇರಳದ ಕೊಚ್ಚಿ ಮಾದರಿಯಲ್ಲಿ ಕರ್ನಾಟಕದ ಕರಾವಳಿ ಭಾಗದಲ್ಲೂ ವಾಟರ್ ಮೆಟ್ರೋ ಸೇವೆ ಆರಂಭಿಸುವ ಮಹತ್ವಾಕಾಂಕ್ಷಿ ಯೋಜನೆಗೆ ವೇಗ ಸಿಕ್ಕಿದ್ದು, ರಾಜ್ಯದ ಕರಾವಳಿ ಪ್ರದೇಶಗಳಲ್ಲಿ 23 ವಾಟರ್ ಮೆಟ್ರೋ ಕೇಂದ್ರಗಳನ್ನು ಗುರುತಿಸಲಾಗಿದೆ ಎಂದು ಕರಾವಳಿ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಗಫೂರ್ ತಿಳಿಸಿದ್ದಾರೆ.

ಶನಿವಾರ ಕಾರವಾರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕರಾವಳಿ ಪ್ರದೇಶದಲ್ಲಿರುವ ನದಿಗಳು, ಹಿನ್ನೀರು (ಬ್ಯಾಕ್‌ವಾಟರ್) ಹಾಗೂ ಜಲಮಾರ್ಗಗಳನ್ನು ಸಂಪರ್ಕಿಸುವ ಮೂಲಕ ಸುರಕ್ಷಿತ, ವೇಗದ ಮತ್ತು ಪರಿಸರ ಸ್ನೇಹಿ ಜಲಸಾರಿಗೆ ವ್ಯವಸ್ಥೆ ರೂಪಿಸುವ ಉದ್ದೇಶ ಹೊಂದಲಾಗಿದೆ ಎಂದರು.

ಈಗಾಗಲೇ ಕರಾವಳಿ ಅಭಿವೃದ್ಧಿ ಮಂಡಳಿ ಹಾಗೂ ಸಂಬಂಧಿಸಿದ ಅಧಿಕಾರಿಗಳ ತಂಡ ಕೇರಳದ ಕೊಚ್ಚಿಗೆ ಭೇಟಿ ನೀಡಿ ಅಲ್ಲಿ ಯಶಸ್ವಿಯಾಗಿ ಕಾರ್ಯನಿರ್ವಹಿಸುತ್ತಿರುವ ವಾಟರ್ ಮೆಟ್ರೋ ಯೋಜನೆಯ ಕಾರ್ಯವೈಖರಿಯನ್ನು ಅಧ್ಯಯನ ಮಾಡಿದೆ. ಬಳಿಕ ಕೊಚ್ಚಿ ವಾಟರ್ ಮೆಟ್ರೋ ಅಧಿಕಾರಿಗಳ ತಂಡವೂ ಕರ್ನಾಟಕ ಕರಾವಳಿ ಪ್ರದೇಶಗಳಿಗೆ ಭೇಟಿ ನೀಡಿ ಪ್ರಾಥಮಿಕ ಸಮೀಕ್ಷೆ ನಡೆಸಿ 23 ಸಾಧ್ಯತೆಯ ಕೇಂದ್ರಗಳನ್ನು ಗುರುತಿಸಿದೆ ಎಂದು ಮಾಹಿತಿ ನೀಡಿದರು.

ಯೋಜನೆಯಡಿ ಕಾರವಾರದ ಕಾಳಿ ನದಿಯ ಹಿನ್ನೀರು ಪ್ರದೇಶ, ಹೊನ್ನಾವರ ಶರಾವತಿ ಹಿನ್ನೀರಿನ ಭಾಗ ಸೇರಿದಂತೆ ಕರಾವಳಿಯ ಹಲವು ಬ್ಯಾಕ್‌ವಾಟರ್ ಪ್ರದೇಶಗಳನ್ನು ಪರಸ್ಪರ ಸಂಪರ್ಕಿಸುವ ಪ್ರಸ್ತಾವನೆ ಇದೆ. ಮೊದಲ ಹಂತದ ತಾಂತ್ರಿಕ ಅಧ್ಯಯನ ಪೂರ್ಣಗೊಂಡಿದ್ದು, ಈಗ ಪ್ರಯಾಣಿಕರ ಬೇಡಿಕೆ ಹಾಗೂ ಸಂಚಾರ ಸಾಧ್ಯತೆ ಕುರಿತು ಟ್ರಾಫಿಕ್ ಸರ್ವೆ ನಡೆಸಲಾಗುತ್ತದೆ. ಬಳಿಕ ಅಂತಿಮ ವಿಸ್ತೃತ ಯೋಜನಾ ವರದಿ (ಡಿಪಿಆರ್) ಸಿದ್ಧಪಡಿಸಿ ರಾಜ್ಯ ಹಾಗೂ ಕೇಂದ್ರ ಸರ್ಕಾರಕ್ಕೆ ಸಲ್ಲಿಸಲಾಗುವುದು ಎಂದರು.

ವಾಟರ್ ಮೆಟ್ರೋ ಜಾರಿಯಾದರೆ ಪ್ರವಾಸೋದ್ಯಮಕ್ಕೆ ಹೊಸ ಆಯಾಮ ದೊರೆಯುವುದರ ಜೊತೆಗೆ ಸ್ಥಳೀಯರಿಗೆ ಸುಲಭ ಜಲಸಾರಿಗೆ ವ್ಯವಸ್ಥೆ, ಉದ್ಯೋಗಾವಕಾಶಗಳು ಮತ್ತು ಕರಾವಳಿ ಆರ್ಥಿಕತೆಗೆ ಉತ್ತೇಜನ ಸಿಗಲಿದೆ. ರಸ್ತೆ ಸಂಚಾರದ ಮೇಲಿನ ಒತ್ತಡ ಕಡಿಮೆಯಾಗುವ ಜೊತೆಗೆ ಪರಿಸರ ಸ್ನೇಹಿ ಸಾರಿಗೆ ವ್ಯವಸ್ಥೆ ನಿರ್ಮಾಣವಾಗಲಿದೆ ಎಂದು ಅವರು ಅಭಿಪ್ರಾಯಪಟ್ಟರು.

ಕರ್ನಾಟಕದಲ್ಲಿ ಸುಮಾರು 320 ಕಿ.ಮೀ. ಉದ್ದದ ಕರಾವಳಿ ಹಾಗೂ ಕಾಳಿ, ಗಂಗಾವಳಿ, ಅಘನಾಶಿನಿ, ಶರಾವತಿ, ನೇತ್ರಾವತಿ ಸೇರಿದಂತೆ ಹಲವು ನದಿಗಳು ಮತ್ತು ವಿಶಾಲ ಹಿನ್ನೀರು ಪ್ರದೇಶಗಳಿದ್ದು, ಇವುಗಳನ್ನು ಸಮರ್ಪಕವಾಗಿ ಬಳಸಿಕೊಂಡರೆ ಜಲಸಾರಿಗೆ ಮತ್ತು ಪ್ರವಾಸೋದ್ಯಮ ಕ್ಷೇತ್ರದಲ್ಲಿ ಹೊಸ ಅವಕಾಶಗಳು ಸೃಷ್ಟಿಯಾಗಲಿವೆ ಎಂದು ಹೇಳಿದರು.

ಯೋಜನೆಗೆ ರಾಜ್ಯ ಹಾಗೂ ಕೇಂದ್ರ ಸರ್ಕಾರಗಳಿಂದ ಅಗತ್ಯ ಸಹಕಾರ ದೊರೆಯುವ ವಿಶ್ವಾಸವಿದ್ದು, ಮುಂದಿನ ಹಂತದ ಪ್ರಕ್ರಿಯೆಗಳನ್ನು ಶೀಘ್ರ ಪೂರ್ಣಗೊಳಿಸಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಗಫೂರ್ ತಿಳಿಸಿದರು.