ಕಾರವಾರ: ಜಿಲ್ಲೆಯ ವಿವಿಧ ಪೊಲೀಸ್ ಠಾಣಾ ವ್ಯಾಪ್ತಿಗಳಲ್ಲಿ ಓಸಿ (ಮಟಕಾ) ಜೂಜಾಟದ ವಿರುದ್ಧ ಪೊಲೀಸರು ನಡೆಸಿದ ಕಾರ್ಯಾಚರಣೆಯಲ್ಲಿ ಎಂಟು ಮಂದಿ ವಿರುದ್ಧ ಪ್ರತ್ಯೇಕ ಪ್ರಕರಣಗಳನ್ನು ದಾಖಲಿಸಿ, ನಗದು ಹಾಗೂ ಜೂಜಾಟದ ಸಾಮಗ್ರಿಗಳನ್ನು ವಶಪಡಿಸಿಕೊಂಡಿದ್ದಾರೆ.
ಕಾರವಾರ ಗ್ರಾಮೀಣ ಠಾಣೆ ವ್ಯಾಪ್ತಿಯ ಅಮದಳ್ಳಿ ಸಮೀಪದ ಜಡಿಗದ್ದೆಯಲ್ಲಿ ಸುರೇಂದ್ರ ವಸಂತ ನಾಯ್ಕ (49) ಎಂಬಾತ ಸಾರ್ವಜನಿಕರಿಂದ ಹಣ ಪಡೆದು ಓಸಿ ಮಟಕಾ ಜೂಜಾಟ ನಡೆಸುತ್ತಿದ್ದ ವೇಳೆ ಪೊಲೀಸರು ದಾಳಿ ನಡೆಸಿ ₹320 ನಗದು ಹಾಗೂ ಜೂಜಾಟದ ಸಾಮಗ್ರಿಗಳನ್ನು ವಶಪಡಿಸಿಕೊಂಡಿದ್ದಾರೆ.
ಹೊನ್ನಾವರ ಪಟ್ಟಣದ ಶರಾವತಿ ಸರ್ಕಲ್ ಸಮೀಪದ ಮಹಾಗಣಪತಿ ಪಾನ್‌ಶಾಪ್ ಎದುರು ಸುರೇಶ ನಾಗಪ್ಪ ನಾಯ್ಕ ಓಸಿ ಜೂಜಾಟ ನಡೆಸುತ್ತಿದ್ದ ಆರೋಪದಡಿ ಆತನ ಮೇಲೆ ಪ್ರಕರಣ ದಾಖಲಿಸಿ, ₹1,150 ನಗದು, ಓಸಿ ಚೀಟಿ ಹಾಗೂ ಬಾಲ್‌ಪೆನ್ ವಶಪಡಿಸಿಕೊಳ್ಳಲಾಗಿದೆ.

ಭಟ್ಕಳ ಶಹರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಎರಡು ಪ್ರತ್ಯೇಕ ಪ್ರಕರಣಗಳು ದಾಖಲಾಗಿವೆ. ಮೊದಲ ಪ್ರಕರಣದಲ್ಲಿ ಸುನೀಲ್ ಮಂಜುನಾಥ ನಾಯ್ಕ ಹಾಗೂ ಬಾಬು ಅಲಿಯಾಸ್ ರಾಘವೇಂದ್ರ ರಾಮ ನಾಯ್ಕ ವಿರುದ್ಧ ಪ್ರಕರಣ ದಾಖಲಾಗಿದ್ದು, ₹1,200 ನಗದು ಮತ್ತು ಜೂಜಾಟದ ಸಾಮಗ್ರಿಗಳನ್ನು ವಶಪಡಿಸಿಕೊಳ್ಳಲಾಗಿದೆ. ಮತ್ತೊಂದು ಪ್ರಕರಣದಲ್ಲಿ ಗುರುರಾಜ ಅನಂತ ನಾಯ್ಕ ಹಾಗೂ ಗಣೇಶ ಶನಿಯಾರ ನಾಯ್ಕ ವಿರುದ್ಧ ಪ್ರಕರಣ ದಾಖಲಿಸಿ ₹1,100 ನಗದು, ಓಸಿ ಚೀಟಿ ಹಾಗೂ ಬಾಲ್‌ಪೆನ್ ವಶಪಡಿಸಿಕೊಳ್ಳಲಾಗಿದೆ.
ಗೋಕರ್ಣ ಠಾಣೆ ವ್ಯಾಪ್ತಿಯ ಗಂಜಿಗದ್ದೆಯಲ್ಲಿ ಗಜಾನನ ಮಾರುತಿ ಶಾನಭಾಗ ಎಂಬಾತ ಓಸಿ ಚೀಟಿ ಬರೆಯುತ್ತಿದ್ದ ವೇಳೆ ದಾಳಿ ನಡೆಸಿದ ಪೊಲೀಸರು ₹560 ನಗದು, ಓಸಿ ಚೀಟಿಗಳು, ಖಾಲಿ ಚೀಟಿಗಳು ಹಾಗೂ ಬಾಲ್‌ಪೆನ್ ವಶಪಡಿಸಿಕೊಂಡಿದ್ದಾರೆ.
ಶಿರಸಿ ಗ್ರಾಮೀಣ ಠಾಣೆ ವ್ಯಾಪ್ತಿಯ ಮಾಣಗದ್ದೆ ಕ್ರಾಸ್ ಬಳಿ ಸಂತೋಷಕುಮಾರ ಮರಾಠಿ ಎಂಬಾತ ಓಸಿ ಜೂಜಾಟ ನಡೆಸುತ್ತಿದ್ದ ವೇಳೆ ಪೊಲೀಸರು ದಾಳಿ ನಡೆಸಿ ₹350 ನಗದು, ಓಸಿ ಚೀಟಿ, ಖಾಲಿ ಚೀಟಿಗಳು ಹಾಗೂ ಬಾಲ್‌ಪೆನ್ ವಶಪಡಿಸಿಕೊಂಡಿದ್ದಾರೆ. ಎಲ್ಲಾ ಪ್ರಕರಣಗಳಲ್ಲಿ ಸಂಬಂಧಪಟ್ಟ ಠಾಣೆಗಳಲ್ಲಿ ಕರ್ನಾಟಕ ಪೊಲೀಸ್ ಕಾಯ್ದೆಯ ಕಲಂ 78(3)ರಡಿ ಪ್ರಕರಣಗಳನ್ನು ದಾಖಲಿಸಿಕೊಂಡು ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.
