ಕಾರವಾರ: ಅಣುಶಕ್ತಿ ನಿಗಮ (NPCIL) ಕೈಗಾ ಅಣು ವಿದ್ಯುತ್ ಯೋಜನೆಯ 5 ಮತ್ತು 6ನೇ ಘಟಕಗಳ (2×700 ಮೆಗಾವಾಟ್ ಪಿಎಚ್‌ಡಬ್ಲ್ಯುಆರ್) ನಿರ್ಮಾಣ ಕಾಮಗಾರಿಯಲ್ಲಿ ಮತ್ತೊಂದು ಮಹತ್ವದ ಮೈಲಿಗಲ್ಲು ಸಾಧಿಸಿದೆ.

ನೈಋತ್ಯ ಮುಂಗಾರು ಮಳೆಯ ತೀವ್ರ ಸವಾಲಿನ ನಡುವೆಯೂ ಭಾರತೀಯ ಪಿಎಚ್‌ಡಬ್ಲ್ಯುಆರ್ (Pressurised Heavy Water Reactor) ಯೋಜನೆಗಳಲ್ಲಿ ಇದುವರೆಗಿನ ಅತಿದೊಡ್ಡ ನಿರಂತರ ರಿಯಾಕ್ಟರ್ ಅಡಿಪಾಯ ಕಾಂಕ್ರೀಟ್ ಸುರಿಯುವ (ಸುಮಾರು 7,250 ಘನ ಮೀಟರ್) ಕಾಮಗಾರಿಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಲಾಗಿದೆ.
ಈ ಸಾಧನೆಗಾಗಿ ಎನ್‌ಪಿಸಿಐಎಲ್ ತಂಡವು ಸೂಕ್ಷ್ಮ ಯೋಜನೆ, ನವೀನ ಎಂಜಿನಿಯರಿಂಗ್ ತಂತ್ರಜ್ಞಾನ ಹಾಗೂ ಕಟ್ಟುನಿಟ್ಟಿನ ಗುಣಮಟ್ಟದ ನಿಯಮಗಳನ್ನು ಅನುಸರಿಸಿತು. ಮಳೆಯ ನಡುವೆಯೂ ಕಾಮಗಾರಿ ಅಡೆತಡೆಯಿಲ್ಲದೆ ಸಾಗಲು 75 ಮೀಟರ್ ಉದ್ದದ ವಿಶೇಷ ರಕ್ಷಣಾತ್ಮಕ ಕ್ಯಾನೊಪಿ, ತಾಪಮಾನ ನಿಯಂತ್ರಿತ ಕಾಂಕ್ರೀಟ್ ಉತ್ಪಾದನಾ ವ್ಯವಸ್ಥೆ, ಕಠಿಣ ಗುಣಮಟ್ಟದ ಪರಿಶೀಲನೆ ಹಾಗೂ 24 ಗಂಟೆಗಳ ನಿರಂತರ ಸಮನ್ವಯದೊಂದಿಗೆ ಕಾರ್ಯನಿರ್ವಹಿಸಲಾಯಿತು.
ಈ ಸಾಧನೆಯು ಎನ್‌ಪಿಸಿಐಎಲ್‌ನ ತಾಂತ್ರಿಕ ಪರಿಣತಿ, ಸಿಬ್ಬಂದಿಯ ಸಮರ್ಪಣೆ ಹಾಗೂ ತಂಡದ ಸಮನ್ವಯವನ್ನು ಪ್ರತಿಬಿಂಬಿಸುತ್ತದೆ. ಜೊತೆಗೆ, ಸುರಕ್ಷಿತ, ವಿಶ್ವಮಟ್ಟದ ಹಾಗೂ ವಿಶ್ವಾಸಾರ್ಹ ಅಣು ವಿದ್ಯುತ್ ಮೂಲಸೌಕರ್ಯ ನಿರ್ಮಾಣದ ಮೂಲಕ ಭಾರತದ ಸ್ವಚ್ಛ ಇಂಧನ ಭವಿಷ್ಯಕ್ಕೆ ಬಲ ತುಂಬುವ ಎನ್‌ಪಿಸಿಐಎಲ್‌ನ ಬದ್ಧತೆಯನ್ನು ಮತ್ತೊಮ್ಮೆ ಸಾಬೀತುಪಡಿಸಿದೆ.
ಕೈಗಾ 5& 6ನೇ ಘಟಕಗಳ ನಿರ್ಮಾಣ ಪ್ರಗತಿಯಲ್ಲಿನ ಈ ಮಹತ್ವದ ಸಾಧನೆ, ಯೋಜನೆಯ ಮುಂದಿನ ಹಂತಗಳಿಗೆ ಹೊಸ ವೇಗ ನೀಡುವ ನಿರೀಕ್ಷೆ ಮೂಡಿಸಿದೆ.
