Karwar| ತಾಲೂಕಿನ ಸದಾಶಿವಗಡ ಸಮೀಪ ಸಂಭವಿಸಿದ್ದ ರಸ್ತೆ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಬುಲೆಟ್ ಬೈಕ್ ಸವಾರ ಚಿಕಿತ್ಸೆ ಫಲಕಾರಿಯಾಗದೆ ಗೋವಾದ ಆಸ್ಪತ್ರೆಯಲ್ಲಿ ಇಂದು ಶುಕ್ರವಾರ ಮೃತಪಟ್ಟಿದ್ದಾನೆ. ಸದಾಶಿವಗಡದ ನಿವಾಸಿ ಶುಭಂ ರಾಣೆ (32) ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ ವ್ಯಕ್ತಿ.
ಜುಲೈ 3ರಂದು ಸಂಜೆ ಸುಮಾರು 5.30ರ ವೇಳೆಗೆ ಸದಾಶಿವಗಡದ ದುರ್ಗಾದೇವಿ ದೇವಸ್ಥಾನ ಸಮೀಪದ ತಾರಿವಾಡಾ ರಸ್ತೆಯಲ್ಲಿ ಅಪಘಾತ ಸಂಭವಿಸಿತ್ತು. ಶುಭಂ ತನ್ನ GM08 W4383 ನೋಂದಣಿ ಸಂಖ್ಯೆಯ ಬುಲೆಟ್ ಮೋಟಾರ್‌ಸೈಕಲ್‌ನಲ್ಲಿ ಲಿಂಕ್ ರಸ್ತೆಯಿಂದ ತಾರಿವಾಡಾ ಕಡೆಗೆ ತೆರಳುತ್ತಿದ್ದ ವೇಳೆ ಅತಿವೇಗ ಹಾಗೂ ನಿರ್ಲಕ್ಷ್ಯದಿಂದ ವಾಹನ ಚಲಾಯಿಸಿದ್ದರಿಂದ ಬೈಕ್ ಮೇಲಿನ ನಿಯಂತ್ರಣ ತಪ್ಪಿದೆ. ನಿಯಂತ್ರಣ ತಪ್ಪಿದ ಬೈಕ್ ರಸ್ತೆ ಬದಿಯಲ್ಲಿರುವ ಶಮಸುದ್ದೀನ್ ದರ್ಗಾ ಕಾಂಪೌಂಡ್ ಗೋಡೆಗೆ ಡಿಕ್ಕಿ ಹೊಡೆದ ಪರಿಣಾಮ ಶುಭಂ ಬೈಕ್ ಸಮೇತ ರಸ್ತೆಗೆ ಬಿದ್ದಿದ್ದಾನೆ. ಅಪಘಾತದಲ್ಲಿ ಆತನ ತಲೆಯ ಎಡಭಾಗಕ್ಕೆ ತೀವ್ರ ಪೆಟ್ಟಾಗಿತ್ತು.
ಸ್ಥಳೀಯರು ತಕ್ಷಣ ಆತನನ್ನು ಕಾರವಾರದ ಕ್ರಿಮ್ಸ್ ಆಸ್ಪತ್ರೆಗೆ ದಾಖಲಿಸಿದ್ದರು. ಬಳಿಕ ಹೆಚ್ಚಿನ ಚಿಕಿತ್ಸೆಗೆ ಗೋವಾದ ಪಣಜಿಯಲ್ಲಿರುವ ಕೆಎಂಸಿ (ಮಣಿಪಾಲ) ಆಸ್ಪತ್ರೆಗೆ ಸ್ಥಳಾಂತರಿಸಲಾಗಿತ್ತು. ಆದರೆ, ಚಿಕಿತ್ಸೆ ಪಡೆಯುತ್ತಿದ್ದ ಶುಭಂ ಶುಕ್ರವಾರ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾನೆ.
ಈ ಬಗ್ಗೆ ಚಿತ್ತಾಕುಲ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
