Gokarn| ಅಕ್ರಮ ಮದ್ಯದ ಅಡ್ಡೆಯ ಮೇಲೆ ಭರ್ಜರಿ ದಾಳಿ ನಡೆಸಿದ ಗೋಕರ್ಣ ಪೊಲೀಸರಿಗೆ ಕೊನೆಗೆ ಸಿಕ್ಕಿದ್ದು ಮದ್ಯವಲ್ಲ, ಮದ್ಯದ ಖಾಲಿ ಟೆಟ್ರಾ ಪ್ಯಾಕೇಟ್‌ಗಳು ಮಾತ್ರ!

 ಇಲ್ಲಿನ ತೋರೆಗಜನಿಯ ಹೊಸಕ್ಕಟ್ಟಾ ಕ್ರಾಸ್‌ ರಸ್ತೆಯ ಪಕ್ಕದಲ್ಲಿರುವ ತಾತ್ಕಾಲಿ ಶೆಡ್‌ ನಲ್ಲಿಸಾರ್ವಜನಿಕರಿಗೆ ಅಕ್ರಮವಾಗಿ ಮದ್ಯ ಸೇವಿಸಲು ಅವಕಾಶ ಕಲ್ಪಿಸಲಾಗುತ್ತಿದೆ ಎಂಬ ಮಾಹಿತಿ ಪೋಲಿಸ್‌ ಇಲಾಖೆಗೆ ದೊರೆತಿದೆ. ಈ ಖಚಿತ ಮಾಹಿತಿ ಆಧರಿಸಿ ಗೋಕರ್ಣ ಪೊಲೀಸ್ ಠಾಣೆಯ ಪಿಎಸ್‌ಐ ಸುನೀಲ ಎಂ.ಎ. ನೇತೃತ್ವದ ತಂಡ ಗುರುವಾರ ರಾತ್ರಿ ಅಲ್ಲಿ ದಾಳಿ ನಡೆಸಿದೆ. ಆದರೆ ಭರ್ಜರಿ ದಾಳಿ ನಡೆಸಿದ ಪೋಲಿಸರಿಗೆ ತೀವ್ರ ನಿರಾಸೆ ಕಾದಿತ್ತು. ಏಕೆಂದರೆ ದಾಳಿಯ ವೇಳೆ ಪೋಲಿಸರ ವಶಕ್ಕೆ ಸಿಕ್ಕಿದ್ದು ಎರಡು ‘Original Choice 90 ml’ ಖಾಲಿ ಟೆಟ್ರಾ ಪ್ಯಾಕೇಟ್‌ಗಳು, ಎರಡು ಪ್ಲಾಸ್ಟಿಕ್ ಲೋಟಗಳು ಹಾಗೂ ಒಂದು ಖಾಲಿ ನೀರಿನ ಬಾಟಲಿ ಮಾತ್ರ. ವಶಪಡಿಸಿಕೊಂಡ ವಸ್ತುಗಳ ಮೌಲ್ಯವನ್ನು ಶೂನ್ಯ ರೂಪಾಯಿ ಎಂದು ದಾಖಲಿಸಲಾಗಿದೆ.

ಈ ಸಂಬಂಧ ತೋರೆಗಜನಿಯ ಗೋವಿಂದ ಚೌಡು ಹರಿಕಂತ್ರ (52) ವಿರುದ್ಧ ಗೋಕರ್ಣ ಪೊಲೀಸ್ ಠಾಣೆಯಲ್ಲಿ ಗುನ್ನಾ ಸಂಖ್ಯೆ 107/2026ರಡಿ ಕರ್ನಾಟಕ ಅಬಕಾರಿ ಕಾಯ್ದೆಯ ಕಲಂ 15(ಎ) ಹಾಗೂ 32(3) ಅಡಿಯಲ್ಲಿ ಪ್ರಕರಣ ದಾಖಲಾಗಿದೆ. ತನಿಖೆ ಮುಂದುವರಿದಿದೆ. ಒಟ್ಟಾರೆ, ‘ಭರ್ಜರಿ ದಾಳಿ…..ಆದ್ರೆ ಕೈಗೆ ಸಿಕ್ಕಿದ್ದು ಖಾಲಿ ಪ್ಯಾಕೇಟ್‌ಗಳಷ್ಟೇ!’…ಎಂಬ ಮಾತು ಸ್ಥಳೀಯರಲ್ಲಿ ಚರ್ಚೆಗೆ ಗ್ರಾಸವಾಗಿದೆ.