Yellapur| ರಾಜ್ಯದಲ್ಲಿ ಕಳೆದ ಬಾರಿ ಬಿಜೆಪಿ ಸರ್ಕಾರ ರಚನೆಯಾಗಲು 17 ಕಾಂಗ್ರೆಸ್ ಶಾಸಕರನ್ನು ಹಣ ನೀಡಿ ಖರೀದಿಸಲಾಗಿತ್ತು ಎಂಬ ಕೆ.ಎಸ್. ಈಶ್ವರಪ್ಪ ಅವರ ಹೇಳಿಕೆ ಸಂಪೂರ್ಣ ಆಧಾರರಹಿತ, ಬಾಲಿಶತನದಿಂದ ಕೂಡಿದ್ದು ಎಂದು ಯಲ್ಲಾಪುರ ಕ್ಷೇತ್ರದ ಶಾಸಕ ಶಿವರಾಮ್ ಹೆಬ್ಬಾರ್ ತಿರುಗೇಟು ನೀಡಿದ್ದಾರೆ.
ಈಶ್ವರಪ್ಪ ಹೇಳಿಕೆಗೆ ಯಲ್ಲಾಪುರದಲ್ಲಿ ಪ್ರತಿಕ್ರಿಯಿಸಿದ ಹೆಬ್ಬಾರ್, ತಮ್ಮ ರಾಜಕೀಯ ಅಸ್ತಿತ್ವವನ್ನು ಉಳಿಸಿಕೊಳ್ಳಲು ಹೆಣಗಾಡುತ್ತಿರುವ, ವಿವಾದಾತ್ಮಕ ಹಾಗೂ ಬೇಜವಾಬ್ದಾರಿ ಹೇಳಿಕೆಗಳಿಂದಲೇ ಗುರುತಿಸಿಕೊಂಡಿರುವ ಕೆ.ಎಸ್. ಈಶ್ವರಪ್ಪ ಅವರು ಸಂಪೂರ್ಣ ರಾಜಕೀಯ ದಿವಾಳಿತನಕ್ಕೆ ತಲುಪಿರುವುದು ಅವರ ಇತ್ತೀಚಿನ ಹೇಳಿಕೆಗಳಿಂದ ಸ್ಪಷ್ಟವಾಗುತ್ತಿದೆ.
ಈಶ್ವರಪ್ಪ ಅವರು ತಮ್ಮ ಮಾನಸಿಕ ಸಿಮೀತವನ್ನು ಸಂಪೂರ್ಣವಾಗಿ ಕಳೆದುಕೊಂಡಿದ್ದು, ಅವರನ್ನು ಕೂಡಲೇ ಮಾನಸಿಕ ಆಸ್ಪತ್ರೆಗೆ ಸೇರಿಸಬೇಕು ಹೆಬ್ಬಾರ್ ತೀವ್ರ ವಾಗ್ದಾಳಿ ನಡೆಸಿದರು.
ಒಂದು ವೇಳೆ ಈಶ್ವರಪ್ಪ ಹೇಳಿಕೆಯಲ್ಲಿ ಸತ್ಯಾಂಶವಿದ್ದರೆ, ಯಾರು ಹಣ ನೀಡಿದರು, ಯಾರು ಹಣ ಪಡೆದರು, ಎಷ್ಟು ಹಣ ನೀಡಲಾಯಿತು, ಎಲ್ಲಿ ವ್ಯವಹಾರ ನಡೆಯಿತು ಎಂಬುದರ ಕುರಿತು ದಾಖಲೆ ಸಮೇತ ರಾಜ್ಯದ ಜನತೆಯ ಮುಂದೆ ಬಹಿರಂಗಪಡಿಸಬೇಕು ಎಂದು ಹೆಬ್ಬಾರ್ ಸವಾಲು ಹಾಕಿದರು.
ಸಾಕ್ಷ್ಯಾಧಾರಗಳಿಲ್ಲದೆ ಇಂತಹ ಗಂಭೀರ ಆರೋಪಗಳನ್ನು ಮಾಡುವ ಮೂಲಕ ಈಶ್ವರಪ್ಪ ಅವರು ತಮ್ಮ ರಾಜಕೀಯ ಹತಾಶೆ ಹಾಗೂ ಮಾನಸಿಕ ಅಸ್ಥಿರತೆಯನ್ನು ಪ್ರದರ್ಶಿಸುತ್ತಿದ್ದಾರೆ. ಅವರು ತಮ್ಮ ಆರೋಪಗಳನ್ನು ಸಾಬೀತುಪಡಿಸಲು ವಿಫಲರಾದರೆ ಸಾರ್ವಜನಿಕ ಜೀವನದಲ್ಲಿ ಮುಂದುವರಿಯುವ ಯಾವುದೇ ನೈತಿಕ ಹಕ್ಕು ಅವರಿಗೆ ಉಳಿಯುವುದಿಲ್ಲ. ಕೂಡಲೇ ರಾಜ್ಯದ ಜನತೆಯ ಕ್ಷಮೆಯಾಚಿಸಿ ಸಕ್ರಿಯ ರಾಜಕೀಯದಿಂದ ನಿವೃತ್ತಿ ಪಡೆಯಬೇಕು ಎಂದು ಹೆಬ್ಬಾರ್ ಸಾವಲು ಹಾಕಿದರು.
17 ಶಾಸಕರು ತಮ್ಮ ಶಾಸಕ ಸ್ಥಾನಗಳಿಗೆ ರಾಜೀನಾಮೆ ನೀಡಿ ರಾಜಕೀಯ ತ್ಯಾಗ ಮಾಡಿದ ಪರಿಣಾಮವೇ ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬಂದಿತ್ತು. ಅದರ ಫಲಾನುಭವಿಯಾಗಿ ಸಚಿವ ಸ್ಥಾನವನ್ನು ಅನುಭವಿಸಿದವರಲ್ಲಿ ಈಶ್ವರಪ್ಪ ಕೂಡ ಒಬ್ಬರು ಎಂಬುದನ್ನು ಅವರು ಮರೆತಂತಿದೆ. ಇಂದು ಅದೇ ಶಾಸಕರ ಬಗ್ಗೆ ಅವಹೇಳನಕಾರಿ ಹಾಗೂ ಅವಮಾನಕಾರಿ ಭಾಷೆಯಲ್ಲಿ ಮಾತನಾಡುತ್ತಿರುವುದು ಅವರ ಕೃತಘ್ನತೆಯ ಪರಮಾವಧಿಯಾಗಿದೆ ಎಂದು ಹೆಬ್ಬಾರ್ ಟೀಕಿಸಿದರು.
ತಮ್ಮ ಸಚಿವ ಅವಧಿಯಲ್ಲಿ ನಡೆದ ಭ್ರಷ್ಟಾಚಾರದ ಆರೋಪಗಳು, ವಿಶೇಷವಾಗಿ ಬೆಳಗಾವಿಯ ಗುತ್ತಿಗೆದಾರನ ಆತ್ಮಹತ್ಯೆ ಪ್ರಕರಣದ ಸಂದರ್ಭದಲ್ಲಿ ಅವರ ವಿರುದ್ಧ ವ್ಯಕ್ತವಾಗಿದ್ದ ಜನಾಕ್ರೋಶವನ್ನು ರಾಜ್ಯದ ಜನತೆ ಇನ್ನೂ ಮರೆತಿಲ್ಲ. ತಮ್ಮ ವೈಫಲ್ಯಗಳು ಹಾಗೂ ಭ್ರಷ್ಟಾಚಾರದ ಕಪ್ಪು ಚರಿತ್ರೆಯನ್ನು ಮರೆಮಾಚಲು ಈಶ್ವರಪ್ಪ ಅವರು ಈಗ ಅಸಂಬದ್ಧ ಹಾಗೂ ಆಧಾರರಹಿತ ಹೇಳಿಕೆಗಳ ಮೊರೆ ಹೋಗಿದ್ದಾರೆ ಎಂದು ಹೆಬ್ಬಾರ್ ಆರೋಪಿಸಿದರು.
ರಾಜಕೀಯದಲ್ಲಿ ಕನಿಷ್ಠ ಜವಾಬ್ದಾರಿ, ಪ್ರಾಮಾಣಿಕತೆ ಹಾಗೂ ಸಾರ್ವಜನಿಕ ನೈತಿಕತೆ ಇರಬೇಕಾಗುತ್ತದೆ. ಆದರೆ ಕೆ.ಎಸ್. ಈಶ್ವರಪ್ಪ ಅವರ ಇತ್ತೀಚಿನ ಹೇಳಿಕೆಗಳನ್ನು ಗಮನಿಸಿದರೆ, ಅವರು ಈ ಮೂರೂ ಮೌಲ್ಯಗಳಿಂದ ಸಂಪೂರ್ಣವಾಗಿ ದೂರವಾಗಿರುವುದು ಸ್ಪಷ್ಟವಾಗಿದೆ. ಜನರ ವಿಶ್ವಾಸ ಕಳೆದುಕೊಂಡಿರುವ ಅವರು ಮೊದಲು ತಮ್ಮ ರಾಜಕೀಯ ಆತ್ಮಾವಲೋಕನ ಮಾಡಿಕೊಳ್ಳಲಿ, ನಂತರ ಇತರರ ಬಗ್ಗೆ ಮಾತನಾಡಲಿ ಎಂದು ಶಾಸಕ ಶಿವರಾಮ ಹೆಬ್ಬಾರ್ ಅವರು ತಿರುಗೇಟು ನೀಡಿದರು.
