Bhatkal| ಮುಸ್ಲಿಂ ಯುವಕನೋರ್ವ ಹಿಂದೂ ಯುವತಿಯನ್ನು ಕಾರಿನಲ್ಲಿ ಕರೆದೊಯ್ಯುತ್ತಿದ್ದಾಗ ಹಿಂದೂ ಕಾರ್ಯಕರ್ತರು ತಡೆದು ಭಟ್ಕಳ ಗ್ರಾಮೀಣ ಠಾಣೆಗೆ ಒಪ್ಪಿಸಿದ್ದು, ಪೊಲೀಸರು ಹಿಂದೂ ಕಾರ್ಯಕರ್ತರ ಮೇಲೆಯೇ ಪ್ರಕರಣ ದಾಖಲಿಸಿದ ಘಟನೆ ಜೂ. 17ರಂದು ನಡೆದಿದೆ.

ಸಾಗರ ಮೂಲದ ಮುಸ್ಲಿಂ ಯುವಕ ಆರೋಪಿ ಶಾಹಿದ್ (21) ಭಟ್ಕಳದ ಕಾರಗದ್ದೆಯಲ್ಲಿ ನೆಲೆಸಿದ್ದು, ಆತ ನಗರದ ಅನ್‌ಫಲ್ ಹೈಪರ್ ಮಾರ್ಕೆಟ್‌ನಲ್ಲಿ ಸೇಲ್ಸ್ ಮ್ಯಾನ್ ಆಗಿ ಕೆಲಸ ಮಾಡುತ್ತಿದ್ದ. ಅದೇ ಹೈಪರ್ ಮಾರ್ಕೆಟ್‌ನಲ್ಲಿ ಕೆಲಸ ಮಾಡುತ್ತಾ ಹೈಪರ್ ಮಾರ್ಕೆಟ್‌ನ ಹಾಸ್ಟೆಲ್‌ನಲ್ಲಿ ನೆಲೆಸಿದ್ದ 21 ವರ್ಷದ ಮಾರುಕೇರಿಯ ಹಿಂದೂ ಯುವತಿಯನ್ನು ರಜೆ ಮಾಡುವಂತೆ ಒತ್ತಾಯಿಸಿ ಜೂ. 17ರಂದು ಬೆಳಗ್ಗೆ ಸುಮಾರು 7.30ಕ್ಕೆ ತನ್ನ ಕಾರಿನಲ್ಲಿ ಕುಳ್ಳಿರಿಸಿಕೊಂಡು ಸಾಗರ ರಸ್ತೆಯ ಕಿತ್ರೆ ಕ್ರಾಸ್‌ನ ನಿರ್ಜನ ಪ್ರದೇಶಕ್ಕೆ ಕರೆದೊಯ್ದಿದ್ದ. ಕಾರನ್ನು ಕಾಡು ವ್ಯಾಪ್ತಿಯ ನಿರ್ಜನ ಪ್ರದೇಶಕ್ಕೆ ತಿರುಗಿಸುತ್ತಿದ್ದಂತೇ ಕಾರಿನ ಚಕ್ರ ಮಣ್ಣಿನಲ್ಲಿ ಸಿಲುಕಿಕೊಂಡಿತ್ತು. ಯುವತಿಯನ್ನು ಕಾರಿನ ಹಿಂಬದಿ ಸೀಟಿನಲ್ಲಿ ಕೂರಿಸಿ ಕಾರಿನಿಂದ ಇಳಿದು ಢಿಕ್ಕಿ ಭಾಗದಿಂದ ಕಾರನ್ನು ದೂಡಲು ಆರಂಭಿಸಿದ್ದ. ರಸ್ತೆಯಲ್ಲಿ ವಾಹನದಲ್ಲಿ ಸಾಗುತ್ತಿದ್ದವರು ಇದನ್ನೆಲ್ಲಾ ನೋಡುತ್ತಿದ್ದರೂ ಅದೇ ದಾರಿಯಲ್ಲಿ ವಾಹನ ಚಲಾಯಿಸಿಕೊಂಡು ಬಂದಿದ್ದ ಕುಮಾರ್, ಆರೋಪಿ ಶಾಹಿದ್ ಕಾರನ್ನು ಮುಂದಕ್ಕೆ ಚಲಾಯಿಸಲು ಸಹಾಯ ಮಾಡುವುದಾಗಿ ಮುಂದೆ ಬಂದಿದ್ದ. ಕಾರಿನಲ್ಲಿ ಸೀಟಿನಲ್ಲಿ ಕುಳಿತ ಕುಮಾರ್, ಶಾಹಿದ್‌ಗೆ ನೀನು ಕಾರನ್ನು ದೂಡು ನಾನು ಮಣ್ಣಿನಿಂದ ಟೈರ್ ಅನ್ನು ಮೇಲೆ ಹತ್ತಿಸುತ್ತೇನೆ ಎಂದಿದ್ದ. ಅಷ್ಟರಲ್ಲಾಗಲೇ ಹಿಂಬದಿ ಸೀಟಿನಲ್ಲಿ ಕೆಳಗೆ ಹಿಂದೂ ಯುವತಿ ಅಡಗಿ ಕೂತದ್ದನ್ನು ನೋಡಿದ್ದ ಕುಮಾರ್, ಆಕೆಯ ಬಗ್ಗೆ ಶಾಹಿದ್ ಬಳಿ ವಿಚಾರಣೆ ನಡೆಸಿದ್ದ. ಬಳಿಕ ಸ್ಥಳೀಯರನ್ನು ಕರೆದು ಇಬ್ಬರನ್ನೂ ಕಾರಿನಲ್ಲಿ ಕುಳ್ಳಿರಿಸಿ ಸ್ಥಳೀಯ ಕೆಎಸ್‌ಆರ್‌ಟಿಸಿ ಡಿಪೋ ವ್ಯಾಪ್ತಿಯಲ್ಲಿ ಮೊಬೈಲ್ ರೇಂಜ್ ಬರುವ ಪ್ರದೇಶದಲ್ಲಿ ಕಾರು ನಿಲ್ಲಿಸಿ ಹಿಂದೂ ಮುಖಂಡ ಶ್ರೀಕಾಂತ್‌ಗೆ ಕರೆ ಮಾಡಿದ್ದ.
ಸ್ಥಳಕ್ಕೆ ಕಾರ್ಯಕರ್ತರ ಜತೆ ತೆರಳಿದ ಶ್ರೀಕಾಂತ್, ಮುಸ್ಲಿಂ ಯುವಕ ಹಾಗೂ ಹಿಂದೂ ಯುವತಿಯ ವಿಚಾರಣೆ ಮಾಡಿ ಯಾವುದೇ ಹಲ್ಲೆ ನಡೆಸದೇ ಇಬ್ಬರನ್ನೂ ಕುಮಾರ್ ಹಾಗೂ ಇತರ ಕಾರ್ಯಕರ್ತರ ಜತೆ ಭಟ್ಕಳ ಗ್ರಾಮೀಣ ಠಾಣೆಗೆ ಕರೆದೊಯ್ದು ಪೊಲೀಸರಿಗೆ ಒಪ್ಪಿಸಿದ್ದರು ಎನ್ನಲಾಗಿದೆ.
ಆದರೆ, ಮುಸ್ಲಿಂ ಯುವಕ ತನ್ನ ಜತೆ ನೈತಿಕ ಪೊಲೀಸ್ ಗಿರಿ ನಡೆದಿದೆ ಎಂದು ಠಾಣೆಯಲ್ಲಿ ದೂರು ನೀಡಿದ ಹಿನ್ನೆಲೆ ಹಿಂದೂ ಕಾರ್ಯಕರ್ತರ ಮೇಲೆ ಮಧ್ಯಾಹ್ನವೇ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಬಳಿಕ ಯುವತಿಯನ್ನು ಪ್ರೀತಿ ಮಾಡುವಂತೆ ಒತ್ತಾಯಿಸಿ ಲೈಂಗಿಕವಾಗಿ ಬಳಸಿಕೊಳ್ಳುವ ಉದ್ದೇಶದಿಂದ ಆರೋಪಿ ಶಾಹಿದ್ ತನ್ನನ್ನು ಕರೆದೊಯ್ದಿದ್ದ ಎಂದು ಯುವತಿ ನೀಡಿದ ದೂರಿನ ಹಿನ್ನೆಲೆ ಸಂಜೆ ವೇಳೆ ಮುಸ್ಲಿಂ ಯುವಕನ ಮೇಲೆ ಪ್ರಕರಣ ದಾಖಲಾಗಿದೆ. ಮುಸ್ಲಿಂ ಯುವಕನ ಮೆಡಿಕಲ್ ಟೆಸ್ಟ್ ಮಾಡಲಾಗಿದ್ದು, ಆತನ ಮೇಲೆ ಹಲ್ಲೆ ನಡೆಸಿದ ಯಾವುದೇ ಕುರುಹು ಪತ್ತೆಯಾಗಿಲ್ಲ ಎಂದು ಮಾಹಿತಿ ದೊರಕಿದೆ ಎನ್ನಲಾಗಿದೆ.
ಹಿಂದೂ ಮುಖಂಡರಿಂದ ಪ್ರತಿಭಟನೆ: ಠಾಣೆಗೆ ಒಪ್ಪಿಸಿದ ಹಿಂದೂ ಕಾರ್ಯಕರ್ತರ ಮೇಲೆಯೇ ಪೊಲೀಸರು ಪ್ರಕರಣ ದಾಖಲಿಸಿದ್ದನ್ನು ಕಂಡು ಹಿಂದೂ ಮುಖಂಡರು ಆಕ್ರೋಶಗೊಂಡಿದ್ದು, ಮುಖಂಡರಾದ ಗೋವಿಂದ ನಾಯ್ಕ್, ಶ್ರೀಕಾಂತ್ ನಾಯ್ಕ್ ಹಾಗೂ ಇತರರು ಭಟ್ಕಳ ನಗರ ಠಾಣೆಯ ಮುಂದೆ ಜಮಾಯಿಸಿ ರಾತ್ರಿ 9 ಗಂಟೆಯವರೆಗೆ ಪ್ರತಿಭಟನೆ ನಡೆಸಿದ್ದಾರೆ. ಬಳಿಕ ಪೊಲೀಸರು ವಿಚಾರಣೆ ನಡೆಸಿ ಹಿಂದೂ ಕಾರ್ಯಕರ್ತರ ಮೇಲಿನ ಪ್ರಕರಣ ಕೈಬಿಡುವುದಾಗಿ ಭರವಸೆ ನೀಡಿದ್ದರಿಂದ ಹಿಂದೂ ಮುಖಂಡರ ನೇತೃತ್ವದ ಪ್ರತಿಭಟನೆ ಕೈಬಿಡಲಾಗಿದೆ.
ಪ್ರಕರಣಕ್ಕೆ ಬಿ ರಿಪೋರ್ಟ್ ಹಾಕದಿದ್ರೆ ಭಟ್ಕಳ ಚಲೋ: ಜೂ.18ರಂದು ಪೊಲೀಸರು ಪ್ರಕರಣವನ್ನು ಕೂಲಂಕುಷವಾಗಿ ಪರಿಶೀಲಿಸಿ ಹಿಂದೂ ಮುಖಂಡರು, ಕಾರ್ಯಕರ್ತರ ಮೇಲೆ ಪ್ರಕರಣಕ್ಕೆ ಬಿ ರಿಪೋರ್ಟ್ ಹಾಕದಿದ್ದರೆ ಭಟ್ಕಳ ಚಲೋ ಪ್ರತಿಭಟನೆ ನಡೆಸಲಾಗುವುದು ಎಂದು ಹಿಂದೂ ಮುಖಂಡರು ಎಚ್ಚರಿಕೆ ನೀಡಿದ್ದಾರೆ.
