Karwar| ಹಳಿಯಾಳದಲ್ಲಿ ರೌಡಿ ಶೀಟರ್ನಿಂದ ಪೊಲೀಸರ ಮೇಲಿನ ಹಲ್ಲೆ ಪ್ರಕರಣದ ಬಳಿಕ ವರ್ಗಾವಣೆಗೊಂಡಿರುವ ಎಂಟು ಪೊಲೀಸ್ ಸಿಬ್ಬಂದಿಗಳ ಕುಟುಂಬ ಸದಸ್ಯರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅವರನ್ನು ಭೇಟಿ ಮಾಡಿ ನ್ಯಾಯ ಕೋರುವುದಾಗಿ ತಿಳಿದು ಬಂದಿದೆ.
ಯಾವ ತಪ್ಪಿಗೆ ನಮಗೆ ವರ್ಗಾವಣೆಯ ಶಿಕ್ಷೆ? ಎಂದು ಪ್ರಶ್ನಿಸಿರುವ ಅಮಾನತುಗೊಂಡ ಪೋಲಿಸ್ ಸಿಬ್ಬಂದಿಗಳ ಕುಟುಂಬದ ಸದಸ್ಯರು, ಘಟನೆಯ ಸಂದರ್ಭದಲ್ಲಿ ಕರ್ತವ್ಯ ನಿರ್ವಹಿಸಿದ ತಮ್ಮ ಮೇಲೆ ವಿನಾಃ ಕಾರಣ ಕ್ರಮ ಕೈಗೊಳ್ಳಲಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಘಟನೆ ವೇಳೆ ಪಿಎಸ್ಐ ಸ್ಥಳದಲ್ಲಿದ್ದರೂ ಸೂಕ್ತ ಕ್ರಮ ಕೈಗೊಳ್ಳುವ ಆದೇಶಕ್ಕಾಗಿ ಕಾಯಬೇಕಾದ ಪರಿಸ್ಥಿತಿ ಇತ್ತು. ಅಧಿಕಾರಿಗಳ ಸೂಚನೆ ಇಲ್ಲದೆ ಮುಂದಿನ ಕ್ರಮ ಕೈಗೊಳ್ಳಲು ಸಾಧ್ಯವಾಗದ ಸ್ಥಿತಿಯಲ್ಲಿ ಇದ್ದೆವು ಎಂದು ಸಿಬ್ಬಂದಿಗಳ ಕುಟುಂಬದ ಸದಸ್ಯರು ಅಳಲು ತೋಡಿಕೊಂಡಿದ್ದಾರೆ.
ಘಟನೆ ಹಿನ್ನೆಲೆ: ಇತ್ತೀಚೆಗೆ ಹಳಿಯಾಳ ಪಟ್ಟಣದ ಮೌರ್ಯ ಹೋಟೆಲ್ ಬಳಿ ರೌಡಿ ಶೀಟರ್ ಮಂಜುನಾಥ ಅಲಿಯಾಸ್ ‘ಮಚ್ಚ್ ಮಂಜ’ ಸಾರ್ವಜನಿಕರ ಎದುರೇ ಗಲಾಟೆ ನಡೆಸಿ, ಪೊಲೀಸರ ಜೀಪ್ ತಡೆದು ಸಿಬ್ಬಂದಿಗಳ ಮೇಲೆ ಹಲ್ಲೆ ನಡೆಸಿದ್ದ ಘಟನೆ ನಡೆದಿತ್ತು. ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಘಟನೆ ವೇಳೆ ಪೊಲೀಸರು ಸೂಕ್ತ ಕ್ರಮ ಕೈಗೊಳ್ಳದೆ ಅಸಹಾಯಕರಾಗಿ ನಿಂತಿದ್ದರು ಎಂಬ ಸಾರ್ವಜನಿಕರ ಆಕ್ಷೇಪದ ಹಿನ್ನೆಲೆಯಲ್ಲಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ದೀಪನ್ ಎಂ.ಎನ್. ಅವರು ಹಳಿಯಾಳ ಪೊಲೀಸ್ ಠಾಣೆಯ ಎಸ್ಐ ಬಸವರಾಜ ಅವರನ್ನು ಅಮಾನತು ಮಾಡಿ, ಎಂಟು ಪೊಲೀಸ್ ಸಿಬ್ಬಂದಿಗಳನ್ನು ಬೇರೆಡೆ ವರ್ಗಾವಣೆ ಮಾಡಿದ್ದನ್ನು ಇಲ್ಲಿ ಸ್ಮರಿಸಬಹುದು.
ಇದೀಗ ವರ್ಗಾವಣೆಗೊಂಡ ಸಿಬ್ಬಂದಿಗಳ ಕುಟುಂಬ ಸದಸ್ಯರು ಎಸ್ಪಿ ಅವರನ್ನು ಭೇಟಿ ಮಾಡಿ, ತಮ್ಮ ಸಮಸ್ಯೆ ಹಾಗೂ ಅಹವಾಲು ಸಲ್ಲಿಸಲು ಮುಂದಾಗಿದ್ದಾರೆ. ಭೇಟಿಯ ಬಳಿಕ ಮುಂದಿನ ಬೆಳವಣಿಗೆ ಕುತೂಹಲ ಮೂಡಿಸಿದೆ.
