Karwar| ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಪ್ರಯತ್ನ ಫಲವಾಗಿ ಕಾರವಾರ ಮತ್ತು ಮಡಗಾಂವ್ ನಡುವೆ ಸಂಚರಿಸುತ್ತಿದ್ದ ವಿಶೇಷ ರೈಲನ್ನು ಇನ್ನು ಮುಂದೆ ಖಾಯಂ ಸೇವೆಯನ್ನಾಗಿ ಪರಿವರ್ತಿಸಲು ರೈಲ್ವೆ ಮಂಡಳಿ ಆದೇಶ ಹೊರಡಿಸಿದೆ.

​ಕಾರವಾರ ಭಾಗದ ಸಾರ್ವಜನಿಕರು ಹಾಗೂ ರೈಲ್ವೆ ಪ್ರಯಾಣಿಕರ ಬಹುದಿನಗಳ ಬೇಡಿಕೆಯಾಗಿದ್ದ ಈ ರೈಲು ಸೇವೆಯನ್ನು ಖಾಯಂಗೊಳಿಸುವಂತೆ ಸಂಸದ ಕಾಗೇರಿ ಅವರು ರೈಲ್ವೆ ಸಚಿವರನ್ನು ಭೇಟಿ ಮಾಡಿ, ಮನವಿ ಸಲ್ಲಿಸಿ ಒತ್ತಾಯಿಸಿದ್ದರು. ಸಂಸದರ ಈ ಪ್ರಯತ್ನಕ್ಕೆ ರೈಲ್ವೆ ಇಲಾಖೆಯಿಂದ ಹಸಿರು ನಿಶಾನೆ ಸಿಕ್ಕಿದೆ.

​ಈ ಹಿಂದೆ ವಿಶೇಷ ರೈಲು ಸಂಖ್ಯೆ 01595/01596 ಆಗಿ ಸಂಚರಿಸುತ್ತಿದ್ದ ಈ ಸೇವೆಯನ್ನು, ಇನ್ನು ಮುಂದೆ ಹೊಸದಾಗಿ ರೈಲು ಸಂಖ್ಯೆ 10109/10110 ಮಡಗಾಂವ್ – ಕಾರವಾರ – ಮಡಗಾಂವ್ ಎಕ್ಸ್‌ಪ್ರೆಸ್ ರೈಲನ್ನಾಗಿ ಪ್ರತಿದಿನ ನಿಯಮಿತವಾಗಿ ಓಡಿಸಲಾಗುತ್ತದೆ. ಹೊಸ ವೇಳಾಪಟ್ಟಿಯ ಪ್ರಕಾರ, ರೈಲು ಸಂಖ್ಯೆ 10110 ಕಾರವಾರ – ಮಡಗಾಂವ್ ಎಕ್ಸ್‌ಪ್ರೆಸ್ ಪ್ರತಿದಿನ ಬೆಳಿಗ್ಗೆ 08:30 ಕ್ಕೆ ಕಾರವಾರದಿಂದ ಹೊರಟು, ಅದೇ ದಿನ ಬೆಳಿಗ್ಗೆ 09:45 ಕ್ಕೆ ಮಡಗಾಂವ್ ತಲುಪಲಿದೆ.

ಹಾಗೆಯೇ ಮರುಪ್ರಯಾಣದಲ್ಲಿ ರೈಲು ಸಂಖ್ಯೆ 10109 ಮಡಗಾಂವ್ – ಕಾರವಾರ ಎಕ್ಸ್‌ಪ್ರೆಸ್ ಪ್ರತಿದಿನ ಸಂಜೆ 04:30 ಕ್ಕೆ ಮಡಗಾಂವ್‌ನಿಂದ ಹೊರಟು, ಸಂಜೆ 05:45 ಕ್ಕೆ ಕಾರವಾರವನ್ನು ತಲುಪಲಿದೆ. ಈ ಎರಡು ಪ್ರಮುಖ ನಿಲ್ದಾಣಗಳ ನಡುವೆ ಸಂಚರಿಸುವ ಪ್ರಯಾಣಿಕರ ಅನುಕೂಲಕ್ಕಾಗಿ ಈ ರೈಲಿಗೆ ಕಾಣಕೋಣ ನಿಲ್ದಾಣದಲ್ಲಿ ವಾಣಿಜ್ಯ ನಿಲುಗಡೆಯನ್ನು ಕಲ್ಪಿಸಲಾಗಿದೆ.

​ಈ ರೈಲು ಎಸಿ (AC), ಸ್ಲೀಪರ್ ಮತ್ತು ಸಾಮಾನ್ಯ ದರ್ಜೆಯ ಬೋಗಿಗಳನ್ನು ಒಳಗೊಂಡ ಒಟ್ಟು 14 ಬೋಗಿಗಳೊಂದಿಗೆ ಸಂಚರಿಸಲಿದೆ. ಈ ಭಾಗದ ಜನಸಾಮಾನ್ಯರಿಗೆ, ಉದ್ಯೋಗಿಗಳಿಗೆ, ಪ್ರವಾಸಿಗರಿಗೆ ಹಾಗೂ ಆರೋಗ್ಯ ಸೇವೆಗಾಗಿ ಗೋವಾಕ್ಕೆ ತೆರಳುವ ರೋಗಿಗಳಿಗೆ ಅತ್ಯಂತ ಉಪಯುಕ್ತವಾಗಲಿರುವ ಈ ಖಾಯಂ ರೈಲು ಸೇವೆಯ ಸೌಲಭ್ಯವನ್ನು ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಸದುಪಯೋಗಪಡಿಸಿಕೊಳ್ಳಬೇಕೆಂದು ಸಂಸದರು ತಿಳಿಸಿದ್ದಾರೆ.

ಇನ್ನು ರೈಲ್ವೆ ರಾಜ್ಯ ಸಚಿವ ವಿ.ಸೋಮಣ್ಣನವರು ಜೂನ್ 11ರಂದು ಮಡಗಾಂವ್ ನಿಲ್ದಾಣದಿಂದ ಈ ರೈಲಿನ ನಿಯಮಿತ ಸೇವೆಗೆ ಹಸಿರು ನಿಶಾನೆ ತೋರಲಿದ್ದಾರೆ ಎಂದು ಸಂಸದರ ಕಾರ್ಯಾಲಯದ ಪ್ರಕಟಣೆಯಲ್ಲಿ ತಿಳಿಸಿದೆ.