Karwar| ತಾಲೂಕಿನಲ್ಲಿ ಇತ್ತೀಚೆಗೆ ನಡೆದಿದ್ದ ಸರಣಿ ದೇವಸ್ಥಾನ ಕಳ್ಳತನ ಪ್ರಕರಣಗಳನ್ನು ಪೊಲೀಸರು ಭೇದಿಸಿದ್ದು, ಒಬ್ಬ ಆರೋಪಿಯನ್ನು ಬಂಧಿಸಿ ಕಳುವಾಗಿದ್ದ ಪೂಜಾ ಸಾಮಗ್ರಿಗಳನ್ನು ವಶಪಡಿಸಿಕೊಂಡಿದ್ದಾರೆ.
ಬಂಧಿತ ಆರೋಪಿಯನ್ನು ಇಲ್ಲಿನ ಬಾಡ ಗಿಂಡಿವಾಡಾದ ವಿನಾಯಕ ದಯಾನಂದ ಗಾಂವಕರ (40) ಎಂದು ಗುರುತಿಸಲಾಗಿದೆ.
ಕಾರವಾರ ಶಹರ, ಕಾರವಾರ ಗ್ರಾಮೀಣ ಹಾಗೂ ಚಿತ್ತಾಕುಲಾ ಪೊಲೀಸ್ ಠಾಣೆಗಳಲ್ಲಿ ದೇವಸ್ಥಾನ ಕಳ್ಳತನಕ್ಕೆ ಸಂಬಂಧಿಸಿದಂತೆ ಒಟ್ಟು ಐದು ಪ್ರಕರಣಗಳು ದಾಖಲಾಗಿದ್ದವು. ಪ್ರಕರಣಗಳ ತನಿಖೆಗಾಗಿ ವಿಶೇಷ ತಂಡ ರಚಿಸಿ, ಆರೋಪಿಯನ್ನು ಪತ್ತೆ ಹಚ್ಚುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಆರೋಪಿಯಿಂದ ಸುಮಾರು 174 ಕೆ.ಜಿ. ತೂಕದ, ₹87 ಸಾವಿರ ಮೌಲ್ಯದ ಹಿತ್ತಾಳೆ ಮತ್ತು ತಾಮ್ರದ ಪೂಜಾ ಸಾಮಗ್ರಿಗಳಾದ ಘಂಟೆಗಳು, ದೀಪದ ಸಮಯಗಳು ಹಾಗೂ ಆರತಿ ತಟ್ಟೆಗಳು ಸೇರಿದಂತೆ ವಿವಿಧ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.
ವಿಚಾರಣೆ ವೇಳೆ ಆರೋಪಿಯು ಕಾರವಾರ ಶಹರ, ಕಾರವಾರ ಗ್ರಾಮೀಣ ಹಾಗೂ ಚಿತ್ತಾಕುಲಾ ಠಾಣಾ ವ್ಯಾಪ್ತಿಯ ವಿವಿಧ ದೇವಸ್ಥಾನಗಳಿಂದ ಈ ವಸ್ತುಗಳನ್ನು ಕಳವು ಮಾಡಿರುವುದಾಗಿ ಒಪ್ಪಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಜಿಲ್ಲಾ ಪೊಲೀಸ್ ಅಧೀಕ್ಷಕ ದೀಪನ್ ಎಂ.ಎನ್., ಹೆಚ್ಚುವರಿ ಪೊಲೀಸ್ ಅಧೀಕ್ಷಕ ಕೃಷ್ಣಮೂರ್ತಿ ಜಿ. ಹಾಗೂ ಪೊಲೀಸ್ ಉಪಾಧೀಕ್ಷಕ ಗಿರೀಶ ವಿ. ಅವರ ಮಾರ್ಗದರ್ಶನದಲ್ಲಿ ಕಾರ್ಯಾಚರಣೆ ನಡೆಸಲಾಯಿತು. ಕಾರವಾರ ಶಹರ ಪೊಲೀಸ್ ಠಾಣೆಯ ಪೊಲೀಸ್ ನಿರೀಕ್ಷಕಿ ಜಯಶ್ರೀ ಮಾನೆ ನೇತೃತ್ವದ ತನಿಖಾ ತಂಡ ಆರೋಪಿಯನ್ನು ಬಂಧಿಸಿ ಕಳುವಾದ ಸ್ವತ್ತುಗಳನ್ನು ಪತ್ತೆಹಚ್ಚುವಲ್ಲಿ ಪ್ರಮುಖ ಪಾತ್ರವಹಿಸಿತು. ಪ್ರಕರಣ ಭೇದನೆಯಲ್ಲಿ ಉತ್ತಮ ಕಾರ್ಯನಿರ್ವಹಣೆ ತೋರಿದ ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿಯನ್ನು ಜಿಲ್ಲಾ ಪೊಲೀಸ್ ಇಲಾಖೆ ಪ್ರಶಂಸಿಸಿ ಅಭಿನಂದಿಸಿದೆ.
