Bhatkal| ಪಟ್ಟಣದ ಮುರಿನಕಟ್ಟೆಯಲ್ಲಿ ನೂತನವಾಗಿ ನಿರ್ಮಿಸಿದ ಹಿಂದುಗಳ ಧಾರ್ಮಿಕ ಶೃದ್ಧೆಯ ಅಮ್ಮನವರ ಹೊರೆ ಇಡುವ ಮುರಿನಕಟ್ಟೆಯನ್ನು ಧ್ವಂಸವನ್ನು ಖಂಡಿಸಿ ವಿವಿಧ ಹಿಂದೂ ಪರ ಸಂಘಟನೆಗಳು ಇಂದು ಶುಕ್ರವಾರ ಮಧ್ಯಾಹ್ನ ಪಟ್ಟಣದಲ್ಲಿ ಸ್ವಯಂ ಪ್ರೇರಿತ ಬಂದ್ ಹಾಗೂ ಬೃಹತ್ ಪ್ರತಿಭಟನಾ‌ ಮೆರವಣಿಗೆ ಹಮ್ಮಿಕೊಂಡಿದೆ.

ಇಂದು ಮಧ್ಯಾಹ್ನ 3ಕ್ಕೆ ಚನ್ನಪಟ್ಟಣ ಹನುಮಂತ ದೇವಸ್ಥಾನದಿಂದ ಪ್ರತಿಭಟನಾ ಮೆರವಣಿಗೆ ಪ್ರಾರಂಭಗೊಂಡು ತಾಲ್ಲೂಕು ಆಡಳಿತ ಸೌಧಕ್ಕೆ ತೆರಳಿ ಅಧಿಕಾರಿಗಳಿಗೆ ಮನವಿ ನೀಡಲಾಗುತ್ತದೆ.

ಪ್ರತಿಭಟನೆಗೆ ಬೆಂಬಲ: ವಿವಿಧ ಹಿಂದು ಪರ ಸಂಘಟನೆಗಳು ಕರೆ ಕೊಟ್ಟ ಭಟ್ಕಳ ಬಂದ್ ಪ್ರತಿಭಟನೆಗೆ ಭಟ್ಕಳ ರಿಕ್ಷಾ ಚಾಲಕರ ಸಂಘ, ಹಿಂದೂ ಅಂಗಡಿಕಾರರು ಬೆಂಬಲ ಘೋಷಿಸಿದ್ದು, ಭಟ್ಕಳ ನಾಮಧಾರಿ ಸಮಾಜ ಸೇರಿದಂತೆ ತಾಲ್ಲೂಕಿನ ವಿವಿಧ ಹಿಂದೂ ಸಮಾಜ ಪ್ರತಿಭಟನೆಗೆ ಬೆಂಬಲ ಘೋಷಿಸಿದೆ.

ಪೋಲಿಸ್ ಬಂದೋಬಸ್ತ್: ಹಿಂದು ಪರ ಸಂಘಟನೆಗಳು ಕರೆ ಕೊಟ್ಟ ಈ ಪ್ರತಿಭಟನೆಯಲ್ಲಿ ಸಾವಿರಾರು ಜನರು ಪಾಲ್ಗೊಳ್ಳುವ ನಿರೀಕ್ಷೆ ಇದ್ದು, ಯಾವುದೇ ಅಹಿತಕರ ಘಟನೆ ನಡೆಯದಂತೆ ಮುಂಜಾಗ್ರತಾ ಕ್ರಮವಾಗಿ ಭಟ್ಕಳದಲ್ಲಿ ಬಿಗಿ ಪೊಲೀಸ್‌ ಬಂದೋಬಸ್ತ್ ಏರ್ಪಡಿಸಲಾಗಿದೆ.

ಮದ್ಯ ನಿಷೇಧ: ಕಾನೂನು, ಸುವ್ಯವಸ್ಥೆ ಕಾಪಾಡುವ ಉದ್ದೇಶದಿಂದ ಭಟ್ಕಳ ತಾಲೂಕಿನಾದ್ಯಂತ ಮದ್ಯ ಮಾರಾಟ ಹಾಗೂ ಸಾಗಾಟವನ್ನು ನಿಷೇಧಿಸಿ ಜಿಲ್ಲಾಧಿಕಾರಿ ಕೆ. ಲಕ್ಷ್ಮಿಪ್ರಿಯ ಆದೇಶಿಸಿದ್ದಾರೆ. ಇಂದು ಬೆಳಗ್ಗೆ 6 ಗಂಟೆಯಿಂದ ರಾತ್ರಿ 12 ಗಂಟೆಯವರೆಗೆ ತಾಲೂಕಿನ ವ್ಯಾಪ್ತಿಯ ಎಲ್ಲಾ ಮದ್ಯದ ಅಂಗಡಿಗಳು, ಬಾರ್‌ಗಳು ಹಾಗೂ ಮದ್ಯ ಮಾರಾಟ ಕೇಂದ್ರಗಳನ್ನು ಮುಚ್ಚುವಂತೆ ಸೂಚಿಸಲಾಗಿದೆ. ಈ ಅವಧಿಯಲ್ಲಿ ಮದ್ಯ ಸಾಗಾಟ, ಸಂಗ್ರಹ ಹಾಗೂ ಮಾರಾಟಕ್ಕೂ ಸಂಪೂರ್ಣ ನಿರ್ಬಂಧ ವಿಧಿಸಲಾಗಿದೆ.